ಸರಗೂರು ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಂಸ (ಡಾ.ಅಂಬೇಡ್ಕರ್ ವಾದ) ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 
ಜಿಲ್ಲೆ

ಗ್ರಾಪಂ ಮಟ್ಟದಲ್ಲೂ ದಸಂಸ ಶಾಖೆ ಆರಂಭಗೊಳ್ಳಲಿ

ಸರಗೂರು: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್ ವಾದ) ಶಾಖೆಯನ್ನು ಆರಂಭಿಸುವ ಮೂಲಕ ಸಂಘಟನೆ ಬಲಿಷ್ಠಗೊಳಿಸಬೇಕು ಎಂದು ಕರ್ನಾಟಕ ದಸಂಸ ತಾಲೂಕು ಸಂಚಾಲಕ ಸಣ್ಣ ಕುಮಾರ್ ಸಲಹೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ) ವತಿಯಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಹಿಳಾ ಪದಾಧಿಕಾರಿಗಳ ಮತ್ತು ತಾಲೂಕು ಪದಾಧಿಕಾರಿಗಳ ಪುನರ್ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ತಾಲೂಕು ಸಮಿತಿ ಪ್ರತಿ ತಿಂಗಳಿಗೊಮ್ಮೆ ಪದಾಧಿಕಾರಿಗಳ ಸಭೆ ಕರೆದು ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಸಮಿತಿಗೆ ಕಳುಹಿಸಿಕೊಡಬೇಕು. ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಆರಂಭಿಸುವ ಮೂಲಕ ಗ್ರಾಮಗಳಲ್ಲಿರುವ ಸಮಸ್ಯೆ ನಿವಾರಿಸಲು ಪದಾಧಿಕಾರಿಗಳು ಹೋರಾಟ ಮಾಡಬೇಕು. ಸಂಘಟನೆಯಿಂದ ಮಾತ್ರ ನಮ್ಮ ಹಕ್ಕು ಪಡೆಯಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಎರಡು ತಾಲೂಕಿನಿಂದ ಮಾ.15ರಂದು ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಮಾವೇಶದಲ್ಲಿ ಭಾಗವಹಿಸಲು ನಿಮ್ಮ ತಾಲೂಕಿನಿಂದ ಹೆಚ್ಚು ಜನರನ್ನು ಕರೆತರಲು ರಾಜ್ಯ ಸಮಿತಿ ಸೂಚನೆ ನೀಡಲಾಗಿದೆ. ಅದರಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಪದಾಧಿಕಾರಿಗಳಿಗೆ ಕರೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕಿ ಅನುಷಾ ಮಾತನಾಡಿ, ದಸಂಸ ದಲಿತರಿಗಷ್ಟೇ ಸೀಮಿತವಾಗಿಲ್ಲ. ಶೋಷಣೆಗೆ ಒಳಗಾದ ಎಲ್ಲ ಸಮುದಾಯದವರ ರಕ್ಷಣೆಗೆ ನಿಲ್ಲುತ್ತದೆ. ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಟ್ಟರೆ ಹೋರಾಟದ ಮೂಲಕ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದರು.

ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, ಸುಮಾರು ಹಾಡಿಗಳಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರಿಗೆ ಸಾಗುವಳಿ ಪತ್ರ ಬಂದಿದ್ದರೂ ವಿತರಿಸಿಲ್ಲ. ಕಂದಾಯ ಇಲಾಖೆ ಸೌಲಭ್ಯಗಳನ್ನು ಹೋರಾಟದ ಮೂಲಕವೇ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಡಿ ಜನರ ಸಮಸ್ಯೆ ಕೇಳುವವರು ಯಾರೂ ಇಲ್ಲದಂತಾಗಿದೆ. ಆದ್ದರಿಂದ ಹಾಡಿಯ ಮಹಿಳೆಯರು ಸಂಘಟನೆ ಬಲಪಡಿಸಿಕೊಂಡು ನಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಮುಂದೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕರಾದ ಮಹದೇವಸ್ವಾಮಿ, ಮಂಜುನಾಥ, ಕೃಷ್ಣ ಕುರ್ಣೆಗಾಲ, ನಾಗೇಂದ್ರ ಮೊಳೆಯೂರು ಕಾವಲ್, ಸರಗೂರು ತಾಲೂಕು ನೂತನ ಮಹಿಳಾ ಘಟಕದ ಸಂಚಾಲಕಿಯರಾದ ನಾಗಮಲ್ಲಿಗೆ, ರಾಣಿ, ಸೀರಮ್ಮ, ಪಾರ್ವತಿ, ಕಾವ್ಯಾ, ಸ್ವಪ್ನಾ, ಜಯಮ್ಮ, ಮಾದಮ್ಮ, ರೂಪಾ, ಸೌಮ್ಯಾ, ಮಂಗಳಿ, ಎಚ್.ಡಿ.ಕೋಟೆ ತಾಲೂಕು ಸಂಚಾಲಕ ಸಣ್ಣ ಕುಮಾರ್, ಸಂಘಟನಾ ಸಂಚಾಲಕರಾದ ಮಹೇಶ್, ಕಾಳಪ್ಪಾಜಿ, ಆನಂದ, ಕುಮಾರ್,ಟೌನ್ ಸಂಚಾಲಕ ಉದಯ್, ಉಮೇಶ್, ಚೆಲುವರಾಜು, ಪುಟ್ಟಬಸವ, ಸಮೀವುಲ್ಲಾ, ನಾಗರಾಜು, ಮಹಿಳಾ ಘಟಕದ ತಾಲೂಕು ಸಂಚಾಲಕಿ ಪುಟ್ಟಮ್ಮ, ಜ್ಯೋತಿ, ರೇಖಾ,ಭಾಗ್ಯರತಿ ಪುನರ್ ಆಯ್ಕೆ ಮಾಡಲಾಯಿತು.