ಕಲಬುರಗಿ: ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅ.೧ರಂದು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಡಗೌಡ ಹೇಳಿದರು.
ಬೆಂಗಳೂರಿನಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಭೇಟಿ ನೀಡಿದ್ದ ಇಲಾಖೆ ಕಾರ್ಯದರ್ಶಿಗಳು ವಾರದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಭರವಸೆ ಪೂರ್ಣ ಮಾಡಿಲ್ಲ. ಅನಿವಾರ್ಯವಾಗಿ ಅ.೧ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ಭರವಸೆ ಈಡೇರಿಸದಿದ್ದರೆ ಅ.೨೩ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನಿರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕನಿಷ್ಠ ೩೧ ಸಾವಿರ ರೂ. ವೇತನ ನೀಡಬೇಕು. ನಿವೃತ್ತಿ ಹೊಂದಿದರೆ ಕನಿಷ್ಠ ೬೦೦೦ ರೂ. ಪಿಂಚಣಿ ನಿಗದಿ ಮಾಡಬೇಕು ಎಂಬುದು ಸೇರಿ ೧೯ ಬೇಡಿಕೆ ಸರ್ಕಾರದ ಮುಂದೆ ಇಡಲಾಗಿದೆ ಎಂದು ಹೇಳಿದರು.
ಸಂಘದ ನಾಗರಾಜ ಜಿ.ಭಂಗೂರ, ಮಾರುತಿ ಎಸ್ ಸುಗ್ಗಾ, ಭೀಮರಾವ ಅಂಬಲಗಾ, ಜೈ ಭೀಮ ಹೊಸಮನಿ, ಎಂ.ಬಿ.ಸಜ್ಜನ, ಭೋಜರಾಜ ಪಾಟೀಲ್, ಸಿದ್ದುಗೌಡ ಇತರರಿದ್ದರು.