ಹಾವೇರಿ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 2020ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಆಯಾ ಗ್ರಾಪಂಗಳಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯ 8 ತಾಲೂಕುಗಳ ಒಟ್ಟು 223 ಗ್ರಾಪಂಗಳಲ್ಲಿ ಅವಧಿ ಮುಕ್ತಾಯಗೊಂಡ 207 ಗ್ರಾಪಂಗಳ ಮತಗಟ್ಟೆಗಳಲ್ಲಿ ಹಾಗೂ ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಆ. 31ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಗ್ರಾಪಂಗಳ ವ್ಯಾಪ್ತಿಯ ಮತದಾರರು ತಮ್ಮ ಹೆಸರು ಈ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು.
ಚುನಾವಣೆ ನಡೆಯಲಿರುವ ಹಳ್ಳಿಗಳಲ್ಲಿ ಅರ್ಹ ಮತದಾರರು ಇದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು. ಸ್ವೀಕೃತ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ತಹಸೀಲ್ದಾರರು ಪರಿಶೀಲಿಸಿ ನಿಯಮಾನುಸಾರ ಅಂಗೀಕೃತ, ತಿರಸ್ಕೃತಗೊಳಿಸುವ ಕಾರ್ಯ ನಿರ್ವಹಿಸಿ ಚುನಾವಣೆಗಾಗಿ ಮತದಾರರ ಪಟ್ಟಿ ತಯಾರಿಸುವರು ಎಂದು ತಿಳಿಸಿದ್ದಾರೆ.