ಜಿಲ್ಲೆ

ಗ್ರಾಪಂ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಿ

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಯಶಸ್ವಿಯಾಗಿ ಗ್ರಾಪಂ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ತಯಾರಿ ವಿಚಾರವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಪಂ ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ವೇಳಾ ಪಟ್ಟಿ ಪ್ರಕಟವಾಗಬಹುದು. ಇದಕ್ಕೆ ಗ್ರಾಪಂ ವಾರು ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.ಜಿಲ್ಲೆಯಲ್ಲಿ 152 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿನ ಮತಗಟ್ಟೆಗಳ ಸುಸ್ಥಿತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಆದಷ್ಟು ಶೀಘ್ರವಾಗಿ ವರದಿ ನೀಡಬೇಕು. ಒಂದು ವೇಳೆ ದುರಸ್ತಿ, ಮೂಲ ಸೌಕರ್ಯಗಳ ಕೊರತೆ ಇದ್ದರೆ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಜಿಲ್ಲೆಯ ಪ್ರತಿ ಗ್ರಾಪಂಗಳಿಗೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗುವುದು. ಆಯಾ ಗ್ರಾಪಂ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ಕಾರ್ಯ ನಿರ್ವಹಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಯಾ ತಹಸೀಲ್ದಾರ್‌ಗಳಿಗೆ ಮಾಹಿತಿ ನೀಡಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಗುರುತಿಸಿದ್ದು, ಕಡ್ಡಾಯವಾಗಿ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಬೇಕು. ಕರೊನಾ ಆತಂಕ ದೂರವಾಗಿಸಿ, ಹೆಚ್ಚಿನ ಮತದಾನ ಮಾಡಿಸಲು ಮತದಾರರಲ್ಲಿ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪ ವಿಭಾಗಾಧಿಕಾರಿ ಎ.ಎನ್. ರಘುನಂದನ್, ಚುನಾವಣಾ ಶಿರಸ್ತೇದಾರ್ ಮೈಕಲ್ ಬೆಂಜೆಮಿನ್ ಮತ್ತಿತರರು ಇದ್ದರು.

ಚುನಾವಣೆಗೆ ತರಬೇತಿ : 152 ಗ್ರಾಪಂ ವ್ಯಾಪ್ತಿಯಲ್ಲಿ 3,89,640 ಪುರುಷರು, 3,89,706 ಮಹಿಳೆಯರು, 56 ಇತರೆ ಸೇರಿ 7,79,402 ಮಂದಿ ಮತದಾರರಿದ್ದಾರೆ. ಇದಕ್ಕೆ 1332 ಮತಗಟ್ಟೆಗಳನ್ನು ಸ್ಥಾಪಿಸಲಿದ್ದು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಮಾಸ್ಟರ್ ಟ್ರೈನರ್‌ಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.

ಚುನಾವಣಾ ಸಾಮಗ್ರಿ ಪೂರೈಕೆ : ಸಭೆಯಲ್ಲಿ ಮತಗಟ್ಟೆಗಳ ಪೈಕಿ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲು ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಸೂಚಿಸಲಾಯಿತು.

ಚುನಾವಣಾ ಆಯೋಗದ ನಿರ್ದೇಶನದಂತೆ ಕರೊನಾ ಮುಂಜಾಗ್ರತಾ ಕ್ರಮಗಳ ಪಾಲನೆಯಾಗಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿಸಿ ತಿಳಿಸಿದರು.

ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ವಿವರ, ನೇಮಕ ಮತ್ತು ತರಬೇತಿ, ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಮತ ಎಣಿಕೆ ಕೇಂದ್ರ ಹಾಗೂ ಮತ ಪತ್ರಗಳ ಮುದ್ರಣಕ್ಕೆ ಮುದ್ರಣಾಲಯ ಗುರುತಿಸುವಿಕೆ, ಚುನಾವಣೆಗೆ ಅಗತ್ಯವಿರುವ ವಾಹನ ಕಾಯ್ದಿರಿಸುವಿಕೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಯಶಸ್ವಿ ಚುನಾವಣೆಗೆ ಅಗತ್ಯ ಪೊಲೀಸ್ ಬಂದೋಬಸ್ತ್, ನೀತಿ ಸಂಹಿತೆಯ ಅನುಷ್ಠಾನ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.