ಮೂಡಿಗೆರೆ: ರಾಜ್ಯದಲ್ಲಿ 5900 ಗ್ರಾಪಂಗಳ ಪೈಕಿ ಒಂದು ಸಾವಿರ ಗ್ರಾಪಂಗಳಿಗೆ ಕಟ್ಟಡಗಳಿಲ್ಲ. ಇರುವ ಕಟ್ಟಡ ಶಿಥಿಲಗೊಂಡು ಮಳೆ ನೀರು ಸೋರಿಕೆಯಾಗುತ್ತಿದೆ. ಅಂಥ ಕಡೆಗಳಲ್ಲಿ ಕಟ್ಟಡ ನಿರ್ಮಿಸಲು ನಬಾರ್ಡ್‌ನಿಂದ ಅನುದಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ, ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಿರ್ಮಾಣ ಹಂತದಲ್ಲಿರುವ ಕಿರುಗುಂದ ಗ್ರಾಪಂ ಕಚೇರಿ ಕಟ್ಟಡಕ್ಕೆ ಅನುದಾನ ಒದಗಿಸುವಂತೆ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಶನಿವಾರ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಪಂ ಕಟ್ಟಡಗಳಿಗೆ ಸಂಸದರ ನಿಧಿಯಿಂದ ಅನುದಾನ ಬಿಡುಗಡೆ ಮಾಡಲಾಗುವುದು. ಇನ್ನೂ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ನಬಾರ್ಡ್‌ನಿಂದ ಅನುದಾನ ಒದಗಿಸಬೇಕು ಎಂದರು.
ಗ್ರಾಪಂ ಕಚೇರಿ ಸ್ಥಳೀಯ ಸರ್ಕಾರವಾಗಿದೆ. ಅದಕ್ಕೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಹಿಂದೆ ನಿರ್ಮಿಸಿರುವ ಕಟ್ಟಡಗಳು ಶಿಥಿಲಗೊಂಡಿದ್ದರಿಂದ ದುರಸ್ತಿ ಮಾಡುವುದಕ್ಕಿಂತ ಹೊಸ ಕಟ್ಟಡ ನಿರ್ಮಿಸಲು ನಬಾರ್ಡ್ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಕಿರುಗುಂದ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಗೋಪುರ ನಿರ್ಮಿಸಲಾಗುವುದು. ಜನ್ನಾಪುರದಲ್ಲಿರುವ ಗೋಪುರದ ನೆಟ್‌ವರ್ಕ್ ವ್ಯಾಪ್ತಿ ಕಿರುಗುಂದ ಗ್ರಾಮದವರೆಗೆ ವಿಸ್ತರಿಸಲಾಗಿದೆ. ಮಳೆಗಾಲದಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿ ಜನ ಕಷ್ಟ ಪಡಬೇಕಾಗಿದೆ. ಈ ಬಗ್ಗೆ ಗ್ರಾಮಸ್ಥರಿಂದ ಅಹವಾಲು ಬಂದಿದೆ. ನೆಟ್‌ವರ್ಕ್ ಸಮಸ್ಯೆಯಿರುವ ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಯಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಗೋಪುರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಚಾರ್ಮಾಡಿ ಘಾಟ್ ಪ್ರದೇಶದ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಮೊಬೈಲ್ ಗೋಪುರ ನಿರ್ಮಿಸಿದರೆ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತದೆ ಎಂದು ಸೆಟಲೈಟ್ ಮೂಲಕ ನೇರವಾಗಿ ಉಪಗ್ರಹದಿಂದ ಪ್ರಾಯೋಗಿಕವಾಗಿ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆ ಮಾಡಲಾಗಿದೆ. ಅದು ಈಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕೂಡಲೆ ಆ ಗ್ರಾಮಗಳಲ್ಲಿ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ತಿಂಗಳೂ ಬಿಎಸ್‌ಎನ್‌ಎಲ್ ಅಧಿಕಾರಿಗಳ ಸಭೆ ನಡೆಸಿ ಅವರಿಗೆ ಸೂಕ್ತ ಸಲಹೆ, ಸೂಚನೆ ನೀಡುತ್ತಿರುವುದಾಗಿ ತಿಳಿಸಿದರು.
ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ ಮಾತನಾಡಿ, ಗ್ರಾಪಂ ಕಟ್ಟಡ ಕಾಮಗಾರಿಗೆ ಸಂಸದರ ನಿಧಿಯಿಂದ 10 ಲಕ್ಷ ರೂ. ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಯು.ಎಚ್.ರಾಜಶೇಖರ್ ಮಾತನಾಡಿ, ಕಿರುಗುಂದ ಗ್ರಾಮದಿಂದ ಉದುಸೆಗೆ ತೆರಳುವ 3 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಯಾಗಿದೆ. ಜನ್ನಾಪುರದಿಂದ ಕಿರುಗುಂದದ ಜಿಲ್ಲಾ ಗಡಿವರೆಗೆ 7 ಕಿ.ಮೀ ರಸ್ತೆ ಗುಂಡಿಯಾಗಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಎರಡೂ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯರಾದ ಕೆ.ಆರ್.ದಿನೇಶ್, ಇಂದ್ರಮ್ಮ, ಪೂರ್ಣಿಮಾ, ಮಾಜಿ ಅಧ್ಯಕ್ಷ ರಾಜಶೇಖರ್, ಗ್ರಾಮಸ್ಥರಾದ ಕಿರುಗುಂದ ಅಬ್ಬಾಸ್, ಸತ್ಯನಾರಾಯಣ, ಬಿ.ಎಸ್.ಓಂಕಾರ್, ನಕ್ಷತ್ರಾ, ಸುದೀಶ್, ಗೋಣಿಬೀಡು ಹೋಬಳಿ ಜೆಡಿಎಸ್ ಅಧ್ಯಕ್ಷ ಪ್ರಹ್ಲಾದ, ಪಿಡಿಒ ಸಾಹಿತ್ಯಾ, ಕಾರ್ಯದರ್ಶಿ ನಂಜಯ್ಯ ಇತರರಿದ್ದರು.