ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಮದ್ಯವನ್ನು ಎಲ್ಲೆಡೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿ ಗ್ರಾಪಂ ಎದುರು ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಯುವಕರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಕುಡಿತದ ದಾಸರಾಗುತ್ತಿದ್ದಾರೆ. ಕೂಡಲೇ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಬೇಕು ಎಂದು ಒತ್ತಾಯಿಸಿ ಪಿಡಿಒ ಶಿವಾನಂದ ಹಡಪದ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಕಾಳಿ ಮಾತನಾಡಿ, ಈ ಹಿಂದೆಯೇ ಪೊಲೀಸ್, ಅಬಕಾರಿ ಹಾಗೂ ತಹಸೀಲ್ದಾರ್ಗೆ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಫಕ್ಕೀರವ್ವ ಹೊಸಮನಿ, ಫಕ್ಕೀರವ್ವ ಬಸನಾಳ, ಯಲ್ಲವ್ವ ಕಾಳಿ, ನೀಲವ್ವ ತಿಮ್ಮಾಪುರ, ಸುನೀತಾ ಹೊಸಮನಿ, ಕಲ್ಲವ್ವ ಹೊಸಮನಿ, ಅನಸವ್ವ ಅರಳಳ್ಳಿ, ಗೀತಾ ಹೊಸಮನಿ, ಚನ್ನವ್ವ ಅರಳಳ್ಳಿ ಇತರರು ಪ್ರತಿಭಟನೆಯಲ್ಲಿದ್ದರು.