ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಿ.ಡಿ. ಮಹದೇವ ಅವರನ್ನು ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದರು. 
ಜಿಲ್ಲೆ

ಗ್ರಾಪಂ ಉಪಾಧ್ಯಕ್ಷರಾಗಿ ಮಹದೇವ ಆಯ್ಕೆ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸಿ.ಡಿ.ಮಹದೇವ ಅವಿರೋಧವಾಗಿ ಆಯ್ಕೆಯಾದರು.

ಪ್ರತೀಪ್‌ಕುಮಾರ್ ರಾಜೀನಾಮೆ ಹಿನ್ನೆಲೆಯಲ್ಲಿ ಬುಧವಾರ ಚುನಾವಣೆ ನಿಗದಿಯಾಗಿತ್ತು. ಸಿ.ಡಿ.ಮಹದೇವ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟರಂಗಶೆಟ್ಟಿ ಘೋಷಿಸಿದರು.

ಉಪಾಧ್ಯಕ್ಷ ಸಿ.ಡಿ.ಮಹದೇವ ಮಾತನಾಡಿ, ಬಿಳಿಗಿರಿರಂಗನಬೆಟ್ಟ ಹೊಸ ಪಂಚಾಯಿತಿಯಾಗಿದ್ದು, ಅನೇಕ ಮೂಲ ಸಮಸ್ಯೆಗಳಿವೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸರ್ಕಾರದಿಂದ ಲಭ್ಯವಾಗುವ ಅನುದಾನ ಸದ್ಬಳಕೆ ಮಾಡಿಕೊಂಡು, ಸೋಲಿಗರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದೊಂದು ಪ್ರವಾಸಿ ತಾಣವಾಗಿದ್ದು, ಪಂಚಾಯಿತಿ ವತಿಯಿಂದ ಎಲ್ಲ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ದುಡಿಯುವುದಾಗಿ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಸಾಕಮ್ಮ ನಾಗೇಶ್, ಸದಸ್ಯರಾದ ಪ್ರತೀಪ್‌ಕುಮಾರ್, ರಂಗಮ್ಮ, ಮಾದಮ್ಮ, ಬೇದೇಗೌಡ, ಕಮಲಮ್ಮ, ಪಿಡಿಒ ಮಹದೇವಪ್ಪ, ಕಾರ್ಯದರ್ಶಿ ನಟರಾಜು, ಬಿಲ್‌ಕಲೆಕ್ಟರ್ ನಾಗೇಂದ್ರ ಮುಖಂಡರಾದ ಸಂತೋಷ್, ವೆಂಕಟೇಶ್, ಬಸವಣ್ಣ, ನಾಗರಾಜು, ನಾಗೇಶ್, ಮಾಂಬಳ್ಳಿ ರಾಮು, ಹರೀಶ್‌ಬಾಬು ಇತರರು ಇದ್ದರು.