ಜಿಲ್ಲೆ

ಗ್ರಾಪಂ ಉಪಚುನಾವಣೆ ಅಧಿಸೂಚನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ವೇಳಾಪಟ್ಟಿ ನಿಗದಿಯಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ಮಂಗಲ ಕ್ಷೇತ್ರ (ಅನುಸೂಚಿತ ಜಾತಿ ಮಹಿಳೆ), ಸಾಗಡೆ ಗ್ರಾಮ ಪಂಚಾಯಿತಿಯ ಸಾಗಡೆ ಕ್ಷೇತ್ರ (ಅನುಸೂಚಿತ ಪಂಗಡ), ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮ ಪಂಚಾಯಿತಿಯ ಕುರುಬರಹುಂಡಿ ಕ್ಷೇತ್ರ (ಸಾಮಾನ್ಯ) ಹಾಗೂ ಹೊಣಕನಪುರ ಕ್ಷೇತ್ರ (ಸಾಮಾನ್ಯ), ಹೊರೆಯಾಲ ಗ್ರಾಮ ಪಂಚಾಯಿತಿಯ ಹೊರೆಯಾಲ ಕ್ಷೇತ್ರ (ಸಾಮಾನ್ಯ ಮಹಿಳೆ), ಕೂತನೂರು ಗ್ರಾಮ ಪಂಚಾಯಿತಿಯ ಕೂತನೂರು ಕ್ಷೇತ್ರ (ಸಾಮಾನ್ಯ ಮಹಿಳೆ), ಅಣ್ಣೂರು ಗ್ರಾಮ ಪಂಚಾಯಿತಿಯ ಅಣ್ಣೂರುಕೇರಿ ಕ್ಷೇತ್ರ (ಹಿಂದುಳಿದ ಅ ವರ್ಗ ಮಹಿಳೆ), ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮ ಪಂಚಾಯಿತಿಯ ಉಗನೀಯ ಕ್ಷೇತ್ರ (ಅನುಸೂಚಿತ ಜಾತಿ), ಹನೂರು ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿಯ ಅಣಗಳ್ಳಿದೊಡ್ಡಿ ಕ್ಷೇತ್ರ (ಸಾಮಾನ್ಯ), ರಾಮಾಪುರ ಗ್ರಾಮ ಪಂಚಾಯಿತಿಯ ಪುದುರಾಮಾಪುರ (ಸಾಮಾನ್ಯ ಮಹಿಳೆ), ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಚೆನ್ನೂರು ಕ್ಷೇತ್ರ (ಸಾಮಾನ್ಯ ಮಹಿಳೆ) ಮತ್ತು ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿಯ ಪಿ.ಜಿ.ಪಾಳ್ಯ ಕ್ಷೇತ್ರ (ಸಾಮಾನ್ಯ) ಕ್ಷೇತ್ರದ ತಲಾ ಒಂದು ಸ್ಥಾನಗಳು ಸೇರಿ ಒಟ್ಟು 12 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ನ.12 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 13ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು 15ರಂದು ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ 23 ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದರೆ 25ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರಗಳಲ್ಲಿ 26ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. 26ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.