ಸಾಗರ: ಗ್ರಾಪಂ ಅಧ್ಯಕ್ಷರಿಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿರುವ ತಾಲೂಕಿನ ನಾಡಕಲಸಿ ಗ್ರಾಪಂ ಪಿಡಿಒಗೆ ತಾಪಂ ಕಾರ್ಯನಿವಾರ್ಹಕ ಅಧಿಕಾರಿ ಪುಷ್ಪಾ ಆರ್. ಕಮ್ಮಾರ್ ಶೋಕಾಸ್ ನೋಟಿಸ್ ನೀಡಿದ್ದಾರೆ. ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಅಧ್ಯಕ್ಷರಿಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿದೆ. ಗ್ರಾಪಂಗೆ ತೆರಳಿ ಎಲ್ಲರ ಸಮಕ್ಷಮದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಾಪಂ ಇಒ ವಿಜಯವಾಣಿಗೆ ತಿಳಿಸಿದರು.
ಉಪವಾಸ ಸತ್ಯಾಗ್ರಹ ಬೆದರಿಕೆ
ದಲಿತ ಮಹಿಳೆ ಎಂಬ ಕಾರಣಕ್ಕೆ ಪದೇಪದೆ ಅಪಮಾನ ಮಾಡುತ್ತಿರುವ ಪಿಡಿಒ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ನಾಡಕಲಸೆ ಗ್ರಾಪಂ ಅಧ್ಯಕ್ಷೆ ಅಧ್ಯಕ್ಷೆ ರತ್ನಮ್ಮ ಶೇಖರಪ್ಪ ಎಚ್ಚರಿಕೆ ನೀಡಿದ್ದಾರೆ.
ಗ್ರಾಪಂ ಸದಸ್ಯರು ಮತ್ತು ಡಿಎಸ್‌ಎಸ್ ಪದಾಧಿಕಾರಿಗಳೊಂದಿಗೆ ತಾಪಂ ಇಒಗೆ ಮನವಿ ಸಲ್ಲಿಸಿದ ಅವರು, ಅ.14ರಂದು ಗ್ರಾಪಂ ವ್ಯಾಪ್ತಿಯ ಕೆರೋಡಿ ಎಸ್.ಟಿ. ಕಾಲನಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆಗೆ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರನ್ನು ಆಹ್ವಾನಿಸದೆ ಅವಮಾನ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ಸಂದರ್ಭದಲ್ಲಿ ಅಧ್ಯಕ್ಷರು, ಸದಸ್ಯರನ್ನು ಕರೆಯುವುದು ಶಿಷ್ಟಾಚಾರ. ಆದರೆ ಪಿಡಿಒ, ಗ್ರಾಪಂ ಅಧ್ಯಕ್ಷೆ ದಲಿತ ವರ್ಗಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಯಾವುದೇ ಮಾಹಿತಿ ನೀಡದೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಆಹ್ವಾನ ನೀಡದ ಕುರಿತು ಪಿಡಿಒ ಅವರನ್ನು ವಿಚಾರಿಸಿದರೆ, ನನಗೆ ಕರೆದಿದ್ದಾರೆ. ನಿಮಗೆ ಕರೆದಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ. ನಾನು ದಲಿತ ಮಹಿಳೆ ಎನ್ನುವ ಒಂದೇ ಕಾರಣಕ್ಕೆ ಪಿಡಿಒ ಪದೇ ಪದೆ ಅವಮಾನ ಮಾಡುತ್ತಿದ್ದಾರೆ. ತಕ್ಷಣ ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಪಂ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.