ಹಾಸನ: ಪಿಎಂ ವಿಶ್ವಕರ್ಮ ಸ್ವ-ಉದ್ಯೋಗ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಪಂ ಅಧ್ಯಕ್ಷರ ಹೆಸರನಲ್ಲಿ ಐಡಿ ಸೃಷ್ಟಿಯಾಗಬೇಕು. ಆದರೆ ಬೇರೆಯವರ ಹೆಸರಿನಲ್ಲಿ ಐಡಿ ಸೃಷ್ಟಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಕು ಇಲ್ಲ ಎಂದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಕಲೇಶಪುರ ತಾಲೂಕು ಹಲಸುಲಿಗೆ ಗ್ರಾಪಂ ಅಧ್ಯಕ್ಷೆ ಶೋಭಾ ಎಚ್ಚರಿಸಿದರು.
ಪಿ.ಎಂ. ವಿಶ್ವಕರ್ಮ ಸ್ವ ಉದ್ಯೋಗ ಯೋಜನೆಯಡಿ ಅರ್ಹರ ಆಯ್ಕೆ ಮಾಡಲು ನನಗೆ ಅಧಿಕಾರ ಇದೆ. ಇದನ್ನು ಬೇರೆಯವರ ಹೆಸರಿನಲ್ಲಿ ಖಾಸಗಿ ಸೈಬರ್‌ನಲ್ಲಿ ಐಡಿ ಸೃಷ್ಟಿಸಿದ್ದಾರೆ.ಈ ಸಂಬಂಧ ಪಿಡಿಒ ಅವರನ್ನು ಪ್ರಶ್ನೆ ಮಾಡಿದಾಗ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಉತ್ತರ ನೀಡಿದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಿಡಿಒ ಏನೇ ಮಾಡಬೇಕಾದರೂ ಅಧ್ಯಕ್ಷರೊಂದಿಗೆ ಚರ್ಚೆ ಮಾಡುವುದಿಲ್ಲ. ಸಾಮಾನ್ಯ ಸಭೆಯಲ್ಲೂ ಮಾತನಾಡುವುದಿಲ್ಲ. ಹಾಗಾಗಿ ಗ್ರಾಪಂ ಕಾಮಗಾರಿಗಳು ದುರುಪಯೋಗ ಆಗಿರುವುದು ಕಂಡು ಬಂದಿದೆ. ಗ್ರಾಪಂ ಲೆಟರ್‌ಹೆಡ್ ಸಹ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ನಾನು ಚುನಾಯಿತ ಪ್ರತಿನಿಧಿ, ಗ್ರಾಪಂ ಅಧ್ಯಕ್ಷೆಯಾಗಿದ್ದರೂ, ನನ್ನ ಗಮನಕ್ಕೆ ಬಾರದೆ ಅನೇಕ ಕೆಲಸ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಅಧಿಕಾರಿಗಳಿಂದ ಗೌರವ ದೊರೆಯುತ್ತಿಲ್ಲ. ಈ ಸಂಬಂಧ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಐಡಿ ಸೃಷ್ಟಿಸಿರುವ ಬಗ್ಗೆ ಸ್ಥಳೀಯ ಠಾಣೆ ಹಾಗೂ ಎಸ್ಪಿ ಅವರಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಹಾಯತೆ ವ್ಯಕ್ತಪಡಿಸಿದ ಅವರು 15 ದಿನಗಳಿಂದ ನನಗೆ ಯಾವುದೇ ತನಿಖೆ ಮಾಡಿ ನಮಗೆ ಏನು ವರದಿ ಕೊಟ್ಟಿರುವುದಿಲ್ಲ. ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ಮಟ್ಟಕ್ಕೆ ಹೋಗುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಸೌಮ್ಯ, ಚರಣ್, ಲೋಕೇಶ್ ಇದ್ದರು.