ಹರಪನಹಳ್ಳಿ:ತಾಲೂಕಿನ ತೊಗರಿಕಟ್ಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಎರಡನೇ ಬಾರಿಗೆ ಮುಂದೂಡಿದ್ದು, ಮರು ಚುನಾವಣೆಗೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಸದಸ್ಯರು ನಡೆಸಿದ ನಾಲ್ಕನೇ ದಿನದ ಆಹೋರಾತ್ರಿ ಧರಣಿಯನ್ನು ಗುರುವಾರ ಮುಂದುವರೆಸಿದರು.
ಎರಡು ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಚುನಾವಣಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ. ಆದ್ದರಿಂದ ಬಿಜೆಪಿ ಬೆಂಬಲಿತ 11 ಸದಸ್ಯರು ಗ್ರಾಪಂ ಎದುರು ಧರಣಿ ನಡೆಸಿದರು.
ಗ್ರಾಪಂ ಸದಸ್ಯ ಮಂಜುನಾಥ ಮಾತನಾಡಿ, ನಾಲ್ಕು ದಿನದಿಂದ ಹೋರಾಟ ಮುಂದುವರೆಸಿದ್ದು, ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಚುನಾವಣೆ ಫಲಿತಾಂಶ ಘೋಷಣೆ ಮಾಡಿದ ಬಳಿಕ ಗೊಂದಲವುಂಟಾಗಿದೆ, ಎಂದು ಉದ್ದೇಶ ಪೂರ್ವಕವಾಗಿ ಬೇರೆಯವರ ಒತ್ತಡಕ್ಕೆ ಮಣಿದಿದ್ದಾರೆ. ಚುನಾವಣೆ ಮುಂದೂಡಲು ವಿವಿಧ ಕಾರಣ ಹೇಳುತ್ತಿರುವ ಚುನಾವಣಾ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಸದಸ್ಯೆ ರತ್ನಮ್ಮ ಮಾತನಾಡಿ, ಚುನಾವಣೆ ಪ್ರಕ್ರಿಯೆಯನ್ನು ಕಾನೂನು ಪ್ರಕಾರ ನಡೆಸದೆ ಗೊಂದಲವುಂಟು ಮಾಡಿ ಅತಂತ್ರ ಸ್ಥಿತಿಗೆ ದೂಡಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿ, ಚುನಾವಣಾ ಆಯುಕ್ತರು ಮರು ಚುನಾವಣೆಗೆ ನಡೆಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಪಿಎಸ್‌ಐ ಎಸ್.ಸಿ.ಹಿರೇಮಠ್ ಬಂದೋಬಸ್ತ್ ಏರ್ಪಡಿಸಿದ್ದರು. ಜ್ಯೋತಿನಾಯ್ಕ, ಕೆ.ಆನಂದ, ವೈ.ಮಂಜುನಾಥ, ಗ್ರಾಪಂ ಸದಸ್ಯರಾದ ಸರಿತಾ, ಹನುಮಕ್ಕ, ರುಕ್ಮಣಿ, ಗೋಣೆಪ್ಪ, ರತ್ನಮ್ಮ, ಮಾಲಾಶ್ರೀ, ನೇತ್ರಾವತಿ, ಲಕ್ಷ್ಮಮ್ಮ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರ್.ಲೋಕೇಶ್, ಮಂಜ್ಯನಾಯ್ಕ, ಎಂ.ಮಲ್ಲೇಶ, ಪಂಪನಾಯ್ಕ ಇತರರಿದ್ದರು.