ಚಿಕ್ಕಬಳ್ಳಾಪುರ: ನೀತಿ ಸಂಗ್ರಹಿತೆ ಬಿಗಿ ಕ್ರಮಗಳ ಜಾರಿಯ ನಡುವೆಯೂ ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷಗಳನ್ನೊಡ್ಡುವಿಕೆಯು ಬಿರುಸಿನಿಂದ ನಡೆಯುತ್ತಿದೆ. ಇದೇ ವೇಳೆ ಉಚಿತವಾಗಿ ಒಳ್ಳೆಯ ಮಾಂಸದ ಕೋಳಿಗಳನ್ನೂ ಉಚಿತವಾಗಿ ವಿತರಿಸಲಾಗುತ್ತಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ವಿವಿಧೆಡೆ ರಾಜಾರೋಷವಾಗಿ ಹಾಡಹಗಲೇ ರಾಜಕೀಯ ಮುಖಂಡರು ಟೆಂಪೋ ವಾಹನದಲ್ಲಿ ಕೋಳಿಗಳನ್ನು ತೆಗೆದುಕೊಂಡು ಹೋಗಿ ಮನೆ ಮನೆಗೂ ಹಂಚಿದ್ದಾರೆ. ಅದರಲ್ಲೂ ಜರಬಂಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಪಿಡಚಲಹಳ್ಳಿಯಲ್ಲಿ ಜನ ಮುಗಿ ಬಿದ್ದು, ನನಗೊಂದು ನನ್ನ ಕುಟುಂಬದವರಿಗೊಂದು ಎಂಬ ಭಾವನೆಯಲ್ಲಿ ಕೋಳಿಗಳನ್ನು ಪಡೆದುಕೊಂಡಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಂಚೇನಹಳ್ಳಿಯ ವಿವಿಧೆಡೆ ಪ್ರಾಬಲ್ಯ ಮೆರೆಯಲು ಆಡಳಿತ ಪಕ್ಷದಿಂದ ಹಂಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎರಡನೇ ಹಂತದ ಗ್ರಾ.ಪಂ.ಚುನಾವಣೆಗೆ ಡಿ.27 ರಂದು ಮತದಾನ ನಡೆಯಲಿದೆ. ಇದಕ್ಕೆ ಆಮಿಷಗಳನ್ನೊಡ್ಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಪ್ರಭಾವಿಗಳ ತಂಟೆಗೆ ಏಕೆ ಹೋಗಬೇಕೆಂಬ ಭಾವನೆಯಲ್ಲಿ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ದೂರು ಕೊಟ್ಟಾಗ ಆರೋಪಿಗಳಿಗೆ ಮಾಹಿತಿ ನೀಡಿ, ಅವರು ಖಾಲಿ ಮಾಡಿದ ಮೇಲೆ ಸ್ಥಳಕ್ಕೆ ಹೋಗಿ ವಾಪಸ್ ಬರುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.