ಜಿಲ್ಲೆ

ಗ್ರಾ.ಪಂ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ಚಾಮರಾಜನಗರ:ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ.

ಚಾಮರಾಜನಗರ ತಾಲೂಕಿನ ಸಾಗಡೆ, ಮಂಗಲ ಗ್ರಾಮಪಂಚಾಯಿತಿಯ ತಲಾ ಒಂದು ಸ್ಥಾನ, ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮ ಪಂಚಾಯಿತಿಯ 2 ಹಾಗೂ ಅಣ್ಣೂರು, ಹೊರೆಯಾಲ, ಕೂತನೂರು ಗ್ರಾಮ ಪಂಚಾಯಿತಿಯ ತಲಾ ಒಂದು ಹಾಗೂ ಹನೂರು ತಾಲೂಕಿನ ರಾಮಾಪುರ, ಶೆಟ್ಟಿಹಳ್ಳಿ, ಪಿ.ಜಿ ಪಾಳ್ಯ, ಬಂಡಳ್ಳಿ ಗ್ರಾಮ ಪಂಚಾಯಿತಿಯ ತಲಾ ಒಂದು ಸದಸ್ಯ ಸ್ಥಾನ ಸೇರಿದಂತೆ ಒಟ್ಟು 11 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ನ.6ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ನ.12 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 13ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ನ.15ರಂದು ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ನವೆಂಬರ್ 23ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದರೆ 25ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಮತಗಳ ಎಣಿಕೆ ಕಾರ್ಯವು ತಾಲೂಕು ಕೇಂದ್ರಗಳಲ್ಲಿ 26ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ನ. 26ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಚುನಾವಣೆ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 6 ರಿಂದ ನವೆಂಬರ್ 26ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.