ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಬ್ರಹ್ಮೋತ್ಸವದ 9ನೇಯ ತಿರುನಾಳ್‌ನ ರಾಜಮುಡಿ ಕಿರೀಟದೊಂದಿಗೆ ಅಲಂಕರಿಸಲಾಗಿತ್ತು. 
ಜಿಲ್ಲೆ

ಗ್ರಹಣದ ಹಿನ್ನೆಲೆ ಬಂದ್ ಆಗಿದ್ದ ದೇಗುಲಗಳು

Mandya

ಮೇಲುಕೋಟೆ: ಚಂದ್ರಗ್ರಹಣದ ಅಂಗವಾಗಿ ಶ್ರೀಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದ ಯೋಗನರಸಿಂಹಸ್ವಾಮಿ ದೇವಾಲಯಗಳು ಮಧ್ಯಾಹ್ನ 12ಗಂಟೆಯಿಂದ ಗ್ರಹಣ ಮೋಕ್ಷ ಕಾಲದವರೆಗೆ ಬಂದ್ ಆಗಿದ್ದವು.

ಸ್ಥಾನೀಕರು, ಅರ್ಚಕರು, ಪರಿಚಾರಕರು ಮತ್ತು ಕೈಂಕರ್ಯಪರರು ಗ್ರಹಣ ಸ್ಪರ್ಶ ಕಾಲ 5.45 ಸಮಯದಲ್ಲಿ ಕಲ್ಯಾಣಿಯಲ್ಲಿ ಗ್ರಹಣಸ್ನಾನ ಮಾಡಿ ಪಿತೃಗಳಿಗೆ ತರ್ಪಣಮಾಡಿ 6.17ರ ಮೋಕ್ಷ ಕಾಲದ ನಂತರ ಮತ್ತೆ ಪವಿತ್ರಸ್ನಾನ ದೇವಾಲಯ ಕೈಂಕರ್ಯಕ್ಕೆ ಬಂದರು. ಕರ್ನಾಟಕದಲ್ಲಿ ಗ್ರಹಣ ಗೋಚರ ಮುಕ್ತಾಯವಾದ ನಂತರ ರಾತ್ರಿ 7ಗಂಟೆಯ ವೇಳೆಗೆ ದೇವಾಲಯವನ್ನು ತೆರೆದು ಶ್ರೀಚೆಲುವನಾರಾಯಣಸ್ವಾಮಿಗೆ ವೇದಮಂತ್ರದೊಂದಿಗೆ ಗ್ರಹಣ ಶಾಂತಿಗಾಗಿ ಅಭಿಷೇಕ ನೆರವೇರಿಸಲಾಯಿತು.

ಇಡೀ ದೇವಾಲಯವನ್ನು ವೇದ ಮಂತ್ರಗಳೊಂದಿಗೆ ಶುದ್ಧೀಕರಣ ಮಾಡಿದ ನಿತ್ಯಪೂಜೆ ನಡೆದ ತರುವಾಯ ರಾಜಮುಡಿ ಬ್ರಹ್ಮೋತ್ಸವದ ಅಂತಿಮ ದಿನದ ಪುಷ್ಪಯಾಗ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ರಾಜಮುಡಿ ಬ್ರಹ್ಮೋತ್ಸವ ಮಂಗಳವಾರ ರಾತ್ರಿ ನಡೆದ ಪುಷ್ಪಯಾಗದೊಂದಿಗೆ ವಿಧ್ಯುಕ್ತವಾಗಿ ಸಂಪನ್ನವಾಯಿತು. ಮಹೋತ್ಸವದ 9ನೇ ದಿನವಾದ ಸೋಮವಾರ ಬೆಳಗ್ಗೆ ತೀರ್ಥಸ್ನಾನ ಹಾಗೂ ವೇದಾಂತ ದೇಶಿಕರು ಮತ್ತು ಮಣವಾಳ ಮಾಮುನಿ ಜೀಯರ್ ಸನ್ನಿಧಿಗೆ ಉತ್ಸವ ನೆರವೇರಿತು. ನಂತರ ರಾತ್ರಿ ಪಡಿಮಾಲೆ ನೆರವೇರಿಸಿ ಬ್ರಹ್ಮೋತ್ಸವದಲ್ಲಿ ಪ್ರಮುಖ ಪಾತ್ರವಿರುವ ಎಲ್ಲ ಸ್ಥಾನೀಕರಿಗೆ ಮಾಲೆ ಮರ್ಯಾದೆ ನಡೆಯಿತು. ಇದರೊಂದಿಗೆ ರಾಜಮುಡಿ ಕಿರೀಟ ಧಾರಣೆಯ ಉತ್ಸವ ಸಂಪನ್ನವಾಯಿತು.ರಾಜಮುಡಿ ತಿರುವಾಭರಣ ಪೆಟ್ಟಿಗೆಯ ಆಭರಣಗಳನ್ನು ಬುಧವಾರ ಪರಿಶೀಲಿಸಿದ ನಂತರ ಜಿಲ್ಲಾ ಖಜಾನೆಗೆ ಮರಳಿಸಲಾಗುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.