ಮಳವಳ್ಳಿ: ನಭೋ ಮಂಡಲದಲ್ಲಿ ಮಂಗಳವಾರ ಕಂಡುಬಂದ ಸೂರ್ಯಗ್ರಹಣ ಸಂದರ್ಭ ವೈದಿಕ ವರ್ಗದವರು ಜಪ, ತಪಾದಿಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ತಾಲೂಕಿನ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾದಿಗಳು ನೆರವೇರಿದವು. ನೂರಾರು ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನದ ನಂತರ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಪಟ್ಟಣದ ಮದ್ದೂರು ಮುಖ್ಯರಸ್ತೆ ಬದಿಯಲ್ಲಿರುವ ಮಹದೇಶ್ವರ ದೇವಸ್ಥಾನದ ಬಾಗಿಲು ಮುಚ್ಚುವುದರ ಜತೆಗೆ ಮೇಲ್ಭಾಗದ ಮಹದೇಶ್ವರ ವಿಗ್ರಹ ಸೇರಿದಂತೆ ಹೊರಭಾಗದಲ್ಲಿರುವ ಉತ್ಸವ ಮೂರ್ತಿ ಹಾಗೂ ವಿವಿಧ ದೇವರ ವಿಗ್ರಹಗಳನ್ನು ಬಟ್ಟೆಯಿಂದ ಮುಚ್ಚಿದ್ದು ಕಂಡುಬಂದಿತು.