ಜಿಲ್ಲೆ

ಗ್ರಂಥಾಲಯದ ಓದಿನ ಸಮಯ ಬದಲಾವಣೆಗೆ ಒತ್ತಯಿಸಿ ಮನವಿ

ಅರಸೀಕೆರೆ : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮನಗಂಡು ನಗರ ಗ್ರಂಥಾಲಯದಲ್ಲಿ ಓದಿನ ಸಮಯ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ಎಬಿವಿಪಿ ಮುಖಂಡರು ಸೋಮವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ವಿಭಾ ವಿ ರಾಥೋಡ್ ಅವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡ ಪೃಥ್ವಿ ಮಾತನಾಡಿ, ಪ್ರಸ್ತುತ ಬೆಳಗ್ಗೆ 8ರಿಂದ 11.30 ಹಾಗೂ ಸಂಜೆ 4ರಿಂದ 8.30ರವರೆಗೆ ಓದಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಗದಿತ ಸಮಯಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತರಗತಿಗಳನ್ನು ಬಿಟ್ಟು ಗ್ರಂಥಾಲಯಕ್ಕೆ ತೆರಳಿ ಜ್ಞಾನಾರ್ಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಪಿಎಸ್‌ಸಿ, ಯುಪಿಎಸ್‌ಸಿ, ಎಸ್‌ಡಿಎ, ಎಪ್‌ಡಿಎ ಸೇರಿ ಯಾವುದೇ ಬಗೆಯ ಪರೀಕ್ಷೆಗಳಿಗೆ ನಿರಂತರ ಅಭ್ಯಾಸ ಮಾಡಲು ಅವಕಾಶ ದೊರೆಯದಂತಾಗಿದೆ. ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಾಸ್ತವ ಮನಗಂಡು ಪ್ರತಿನಿತ್ಯ ಬೆಳಗ್ಗೆ 8.30 ಸಂಜೆ 7.30ರವರೆಗೆ ಸಮಯಾವಕಾಶ ನೀಡಬೇಕು ಎಂದರು.

ಪುನೀತ್, ಸುಮಂತ್, ಮನೋಜ್ ನಾಯ್ಕ, ಕಿರಣ್, ದರ್ಶನ್ ಇನ್ನಿತರರಿದ್ದರು.