ಮೈಸೂರು: ಈಗಿನ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವ ಹವ್ಯಾಸವನ್ನೇ ಮರೆತಿದ್ದಾರೆ ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಜೆ. ಸಂಗಮೇಶ್ವರ ಕಳವಳ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ‘ಪುಟಗಳಿಂದಾಚೆ: ಸಂವಹನ ಮತ್ತು ಸೃಜನಶೀಲತೆಯತ್ತ ಗ್ರಂಥಪಾಲನೆ’ ಕುರಿತು ವಿಚಾರಸಂಕಿರಣದಲ್ಲಿ ಮಾತನಾಡಿದರು.
ಗ್ರಂಥಾಲಯಗಳು ಒಂದು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಆದರೀಗ ಆ ಗ್ರಹಿಕೆ ಮರೆಯಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವ ಹವ್ಯಾಸವನ್ನೇ ಕೈಬಿಟ್ಟಿದ್ದಾರೆ. ಒಳ್ಳೆಯ ಕಟ್ಟಡ, ವ್ಯವಸ್ಥೆ, ಸೌಲಭ್ಯಗಳಿದ್ದರೆ ಗ್ರಂಥಾಲಯಕ್ಕೆ ಶ್ರೇಷ್ಠತೆ ಬರಲ್ಲ. ಹೆಚ್ಚಿನ ಓದುಗರು ಇದ್ದಲ್ಲಿ ಮಾತ್ರ ಗ್ರಂಥಾಲಯಕ್ಕೆ ಸೊಬಗು, ವೈಭವ ಬರಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕಿದೆ. ಕ್ರಿಯಾತ್ಮಕವಾಗಿ, ಸೃಜನಾತ್ಮಕರನ್ನಾಗಿಸುವ ಕಡೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ಗ್ರಂಥಾಲಯಗಳು ಯಾವುದೋ ಕಟ್ಟಡದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಬದಲಿಗೆ ಮನೆಯಿಂದಲೇ ಸ್ಥಾಪಿತವಾಗಿರುತ್ತವೆ. ಮಕ್ಕಳಿಗೆ ತಾತ, ಅಜ್ಜಿಯರು ವಚನ, ಕಥೆಗಳು, ಗಾದೆ ಹೇಳುವ ಮೂಲಕ ಪುಸ್ತಕದ ರೂಪದಲ್ಲಿ ಮೌಲ್ಯ ತಿಳಿಹೇಳುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಇದೀಗ ಅವರ ಸ್ಥಾನಗಳನ್ನು ತಂತ್ರಜ್ಞಾನ, ಇಂಟರ್‌ನೆಟ್, ಗೆಜೆಟ್‌ಗಳು ಆಕ್ರಮಿಸಿಕೊಂಡಿವೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಗ್ರಂಥಾಲಯಗಳಲ್ಲಿ ಕುಳಿತಾಗಲೂ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಓದುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಮೊಬೈಲ್ ಮಾಹಿತಿ ಪರಿಕರವೇ ಹೊರತು ಅದು ಜ್ಞಾನವಲ್ಲ.
ಇದರಿಂದ ಯಾವುದೇ ವಿಚಾರಗಳು ಜ್ಞಾನವಾಗಿ ತಲೆಯಲ್ಲಿ ಉಳಿಯುವುದಿಲ್ಲ ಎಂದರು.
ಯುವಕರು ಮೊಬೈಲ್‌ಗಳಲ್ಲಿ ಎಲ್ಲವನ್ನು ಪಿಡಿಎಫ್ ಮೂಲ ಸಂಗ್ರಹಿಸಿಕೊಳ್ಳುತ್ತಾರೆ. ಆದರೆ, ಯಾರು ಸಹ ಓದಿ ಗ್ರಹಿಸಿಕೊಳ್ಳುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾಥಮಿಕವಾಗಿ ಶಿಕ್ಷಣದ ತರಬೇತಿ ಸಾಧನ ಗ್ರಂಥಾಲಯವೇ ಆಗಿದೆ. ವಿಶ್ವವಿದ್ಯಾಲಯಗಳು ಉತ್ತಮವಾಗಿ ಬೆಳೆಯಲು ಉತ್ತಮ ಉಪನ್ಯಾಸಕರ, ಸಂಶೋಧಕರ ಅಗತ್ಯ ಇದೆ. ಇದು ಗ್ರಂಥಾಲಯಗಳಿಂದ ಮಾತ್ರ ಸಾಧ್ಯವಾಗುತ್ತದೆ. ಗ್ರಂಥಾಲಯದಿಂದ ಮಾತ್ರ ಸೃಜನಾತ್ಮಕ ವಿಚಾರಗಳು ಹುಟ್ಟಲು ಸಾಧ್ಯ ಎಂದು ತಿಳಿಸಿದರು.
ಬೆಂಗಳೂರು ಇನ್ ಫಾರ್ಮೇಟಿಕ್ ಇಂಡಿಯಾ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಸತ್ಯನಾರಾಯಣ, ಮೈವಿವಿ ಗ್ರಂಥಾಲಯ, ಮಾಹಿತಿ ವಿಜ್ಞಾನ ವಿಭಾಗದ ಹಳೇ ವಿದ್ಯಾರ್ಥಿಗಳ ಸಂಘದ(ಮಿಲನ್) ಅಧ್ಯಕ್ಷೆ ಡಾ.ಬಿ.ಎಂ ಮೀರಾ, ಮೈವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಅಧ್ಯಕ್ಷ ಪ್ರೊ.ಎಂ.ಚಂದ್ರಶೇಖರ ಇದ್ದರು