ವಡಗೇರಾ : ತಾಲೂಕು ಮತ್ತು ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ವಿದ್ಯಾರ್ಥಿ ಮತ್ತು ಸಾರ್ವಜನಿಕರಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಸಂಗವಾರ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಗ್ರಂಥಾಲಯ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಬೇಕಿದೆ. ಸರ್ಕಾರ ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ವೇತನ ಜಾರಿಗೆ ತಂದಿದೆ. ಕೆಲಸದ ಅವಧಿ ಕೂಡ ೬ರಿಂದ ೮ ಗಂಟೆಗೆ ಹೆಚ್ಚಿಸಿದ್ದು, ತಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ತಾಲೂಕು ಮಾದರಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಮಾಳಿಂಗರಾಯ ನಾಗರಾಳ, ಬಂದಪ್ಪಗೌಡ ಗುಲಸರಂ, ಸುಮಂಗಲಾ ನಾಯ್ಕಲ್, ಅನ್ನಪೂರ್ಣ ಹಾಲಗೇರಾ, ಮರೆಪ್ಪ ಕಾಡಂಗೇರಾ, ಹಣಮಂತ್ರಾಯ ವಡಗೇರಾ, ಮೌಲಾನಾಸಾಬ್, ಚಾಂದಪಾಶಾ ಉಳ್ಳೆಸೂಗೂರ, ಸಿದ್ರಾಮರಡ್ಡಿ ಕುರಕುಂದಿ ಇತರರಿದ್ದರು.