ಬಾಗಲಕೋಟೆ: ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಿ ಅವರ ಬೌದ್ಧಿಕ ವಿಕಾಸದಲ್ಲಿ ಗ್ರಂಥಪಾಲಕರು ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪುರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗ ಡಾ.ಎಸ್.ಆರ್.ರಂಗನಾಥನ್ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನದ ಕಣಜವಾಗಿರುವ ಗ್ರಂಥಾಲಯದ ಪರಿಪೂರ್ಣ ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಂಥಪಾಲಕರು ಅವಶ್ಯಕ ನೆರವು ಮತ್ತು ಮಾರ್ಗದರ್ಶನ ಮಾಡಬೇಕು. ಗ್ರಂಥಾಲಯ ವಿಜ್ಞಾನಕ್ಕೆ ಡಾ.ಎಸ್.ಆರ್.ರಂಗನಾಥನ್ ನೀಡಿದ ಕೊಡುಗೆಯನ್ನು ವಿದ್ಯಾರ್ಥಿಗಳು ಅರಿತು ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆಯಬೇಕು ಎಂದರು.
ಓದುವುದು ಒಂದು ಹವ್ಯಾಸವಾಗಬೇಕು. ಅದರಿಂದ ಜ್ಞಾನದ ಕ್ಷಿತಿಜ ಮತ್ತು ಆಲೋಚನೆಗಳು ವಿಸ್ತಾರವಾಗಿ ಚಿಂತನೆಗೆ ಹೊಸ ಬೆಳಕನ್ನು ನೀಡಬಲ್ಲದು. ಮೊಬೈಲ್ ಸಂಸ್ಕೃತಿಯಿಂದ ದೂರವಾಗಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಪಠ್ಯ,ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ,ಇತಿಹಾಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ಅವುಗಳ ಸದ್ಬಳಕೆ ಮಾಡಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಂಜುನಾಥ ಕೋರವಾರ ಪ್ರಾರ್ಥಿಸಿದರು. ಗ್ರಂಥಪಾಲಕ ಡಿ.ಎಚ್.ಬಿರಾದಾರ ಸ್ವಾಗತಿಸಿದರು. ನಾಗರಾಜ ಹಸಬಿ ನಿರೂಪಿಸಿದರು.ಡಾ.ಎಸ್.ಎಸ್.ಹಂಗರಗಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಎಚ್.ಎಸ್.ಗಿಡಗಂಟಿ,ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡರು.