ಹಾಸನ: ಗ್ಯಾಸ್ ಸೋರಿಕೆಯಾಗಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ದಂಪತಿಗೆ ಸುಟ್ಟಗಾಯವಾಗಿರುವ ಘಟನೆ ಹಾಸನ ತಾಲೂಕಿನ, ಕಬ್ಬತ್ತಿ ಗ್ರಾಮದಲ್ಲಿ ನಡೆದಿದೆ.
ದಂಪತಿ ರಘು ಹಾಗೂ ಭವ್ಯಾ ಗಾಯಗೊಂಡು ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿರುವ ಗಮನಕ್ಕೆ ಬಂದ ತಕ್ಷಣವೇ ಸಿಲಿಂಡರ್ ಆಫ್ ಮಾಡಲು ದಂಪತಿ ಮುಂದಾಗಿದ್ದಾರೆ. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಮನೆಯಲ್ಲಿದ್ದ ವಸ್ತುಗಳು ಭಾಗಶಃ ಹಾನಿಯಾಗಿವೆ.
ಗ್ಯಾಸ್ ಸಿಲಿಂಡರ್ ಸ್ಪೋಟಗೊಳ್ಳುವ ಕೆಲ ನಿಮಿಷಗಳ ಹಿಂದೆ ರಘ-ಭವ್ಯಾ ದಂಪತಿ ಮಕ್ಕಳು ಶಾಲೆಗೆ ತೆರಳಿದ್ದು ಅದೃಷ್ಟವಶಾತ್ ಅನಾಹುತ ತಪ್ಪಿದಂತಾಗಿದೆ. ಸ್ಫೋಟದಿಂದ ಅಗ್ನಿ ಹೊತ್ತಿ ಹುರಿಯುತ್ತಿದ್ದಾಗ ಅಗ್ನಿಶಾಮಕ ಕಚೇರಿಯ ದೂರವಾಣಿಗೆ ಗ್ರಾಮಸ್ಥರು ಕರೆ ಮಾಡಿದ್ದು ಸಂಪರ್ಕ ಸಿಗದ ಹಿನ್ನಲೆಯಲ್ಲಿ ಮೂರು ನಲ್ಲಿಗಳಲ್ಲಿ ನೀರು ಆನ್ ಮಾಡಿ ಗ್ರಾಮಸ್ಥರೇ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.