ಕೊರಟಗೆರೆ: ಕೋಳಿ ಶೆಡ್ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಶನಿವಾರ ತಡರಾತ್ರಿ ಕೊರಟಗೆರೆ ಪಿಎಸ್ಐ ಚೇತನ್ ಕುಮಾರ್ ನೇತೃತ್ವದ ತಂಡ ದಾಳಿ ಮಾಡಿ 137 ಸಿಲಿಂಡರ್, ಒಂದು ಗೂಡ್ಸ್ ವಾಹನ ಹಾಗೂ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಪಟ್ಟಣ ಸಮೀಪದಲ್ಲಿರುವ ಕೋಳಿ ಫಾಮ್ರ್ ಶೆಡ್ನಲ್ಲಿ ಅಕ್ರಮವಾಗಿ ಸಿಲಿಂಡರ್ ಫಿಲ್ಲಿಂಗ್ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಬಡವರಿಗೆ ನೀಡುವ ಉಜ್ವಲ್ ಯೋಜನೆಯ ಗೃಹ ಬಳಕೆಯ 75 ಸಿಲಿಂಡರ್ ಹಾಗೂ 62 ಕಮರ್ಷಿಯಲ್ ಸಿಲಿಂಡರ್ ಹಾಗೂ ಒಂದು ಗೂಡ್ಸ್ ವಾಹನ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಕೋಳಿ ಫಾಮ್ರ್ನಲ್ಲಿ ಬೆಂಗಳೂರಿನ ನಂದೀನಿ ಲೇಔಟ್ನ ಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿಯ ಬಿಲ್ಗಳು ದೊರೆತಿವೆ. ಅಕ್ರಮವಾಗಿ ಸಿಲಿಂಡರ್ ಫಿಲ್ ಮಾಡುತ್ತಿದ್ದ ಬೆಂಗಳೂರು ಮೂಲದ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.
ಕೇಂದ್ರ ಸರ್ಕಾರ ಬಡವರಿಗೆ ನೀಡುವ ಗೃಹ ಉಪಯೋಗಿ ಸಿಲಿಂಡರ್ಗಳನ್ನು ವಾಣಿಜ್ಯ ಉಪಯೋಗಕ್ಕೆ ಬಳಸುವ ದೊಡ್ಡ ಸಿಲಿಂಡರ್ಗಳಿಗೆ ವರ್ಗಾವಣೆ ಮಾಡಿಕೊಂಡು ಹೋಟೆಲ್, ಬೇಕರಿ, ಫ್ಯಾಕ್ಟರಿಗಳಿಗೆ ಸೇರಿ ಇನ್ನೂ ಅನೇಕ ಕಡೆ 2 ಸಾವಿರಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಪತ್ರಕರ್ತರು, ವಕೀಲರ ಗುರುತಿನ ಚೀಟಿ:- ಅಕ್ರಮ ಗ್ಯಾಸ್ ಸಿಲಿಂಡರ್ ವಶಪಡಿಸಿಕೊಂಡ ಸ್ಥಳದಲ್ಲಿ ಕೆಲ ಪತ್ರಿಕೆಗಳ ಹಾಗೂ ವಾಹನದಲ್ಲಿ ವಕೀಲರ ಚಿಹ್ನೆ ಬಳಸಿಕೊಂಡಿರುವ ನಕಲಿ ಗುರುತಿನ ಚೀಟಿ ಸಿಕ್ಕಿದ್ದು, ಪತ್ರಕರ್ತರು ಹಾಗೂ ವಕೀಲರ ಹೆಸರಿನಲ್ಲಿ ಗ್ಯಾಸ್ ದಂಧೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಕಲಿ ಗುರುತಿನ ಚೀಟಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅನಿಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಾಳಿ ವೇಳೆ ಎಎಸ್ಐ ಗಂಗಾಧರಪ್ಪ, ಪೇದೆಗಳಾದ ದೊಡ್ಡಲಿಂಗಯ್ಯ, ಮೋಹನ್, ದಯಾನಂದ್, ರಾಮಚಂದ್ರ, ನವೀನ್, ಸಿದ್ದರಾಮು ಇದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.