ಜಿಲ್ಲೆ

ಗ್ಯಾರಂಟಿಗೆ ಎಸ್ಸಿ-ಎಸ್ಟಿ ಅನುದಾನ ಬಳಕೆ ಸಲ್ಲ

ಚಿತ್ರದುರ್ಗ: ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟಿರುವ ಕೋಟ್ಯಾಂತರ ರೂ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದು, ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು. ಯಾವ ಯೋಜನೆಗೂ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಬಳಸದಂತೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಬಿಎಸ್‌ಪಿ ಅಧ್ಯಕ್ಷ ಎನ್.ಪ್ರಕಾಶ್ ಮಾತನಾಡಿ, 2014-15ನೇ ಸಾಲಿನಿಂದ ಈವರೆಗೂ 2,94,963 ಕೋಟಿ ರೂ. ಎಸ್ಸಿ-ಎಸ್ಟಿ ಸಮುದಾಯಗಳ ಪ್ರಗತಿಗೆ ಮೀಸಲಿಡಲಾಗಿದೆ. ಆದರೆ, ಶೇ. 10ರಷ್ಟು ಅನುದಾನವನ್ನು ಸಮುದಾಯದವರಿಗೆ ನೇರವಾಗಿ ತಲುಪಿಸದೆ ಮೂರು ಪಕ್ಷಗಳು ದ್ರೋಹವೆಸಗಿವೆ. ಈಗಿನ ಕಾಂಗ್ರೆಸ್ ಸರ್ಕಾರ 25,398 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ಹಿಂದಿನ ಬಿಜೆಪಿ ಸರ್ಕಾರ 19 ಸಾವಿರ ಕೋಟಿ ರೂ. ಅನ್ಯ ಯೋಜನೆಗಳಿಗೆ ಖರ್ಚು ಮಾಡಿದ್ದು, ಕಾಯ್ದೆಯ ಮೂಲ ಉದ್ದೇಶ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೋವಿ, ಡಾ.ಬಿ.ಆರ್.ಅಂಬೇಡ್ಕರ್, ಆದಿಜಾಂಬವ ಅಭಿವೃದ್ಧಿ ನಿಗಮಗಳಲ್ಲಿ ಹತ್ತಾರು ಕೋಟಿ ರೂ. ಅವ್ಯವಹಾರವಾಗಿದೆ ಎಂದು ಸರ್ಕಾರವೇ ಹೇಳಿದೆ. ಇಷ್ಟು ಸಾಲದೆಂಬಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಹಗರಣಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮುಖಂಡ ಭೀಮನಕೆರೆ ಶಿವಮೂರ್ತಿ ಮಾತನಾಡಿ, ಸರ್ಕಾರಗಳ ಕೆಟ್ಟ ನಿರ್ಧಾರ, ದುರುದ್ದೇಶದಿಂದಾಗಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಂಚಿತರಾಗುತ್ತಿದ್ದಾರೆ. ಲಕ್ಷಾಂತರ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವಕಾಶ ನೀಡಿಲ್ಲ. ಅನೇಕರಿಗೆ ವಸತಿ, ನಿವೇಶನ ಸೌಲಭ್ಯ ಒದಗಿಸಿಲ್ಲ. ಅತ್ಯುನ್ನತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿಲ್ಲ. ಹೀಗಾಗಿ ಸಮುದಾಯಗಳಿಗೆ ದ್ರೋಹವೆಸಗಿದೆ ಎಂದು ಕಿಡಿಕಾರಿದರು.

ಅರ್ಹರಿಗೆ ಮೂಲಸೌಕರ್ಯದೊಂದಿಗೆ ನಿವೇಶನ, ಕೊಳವೆಬಾವಿ ಕೊರೆಸುವುದು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಅಗತ್ಯವಿರುವೆಡೆ ಕಸ ವಿಲೇವಾರಿ ಘಟಕ, ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಬೇಕು ಎಂದು ಕೋರಿದರು.

ಬಿಎಸ್‌ಪಿ ಪದಾಧಿಕಾರಿಗಳಾದ ಕೆ.ಎನ್.ದೊಡ್ಡಟ್ಟೆಪ್ಪ, ರಾಮಸ್ವಾಮಿ, ಹನುಮಂತರಾಯ, ಜಗದೀಶ್, ಮರಿಸ್ವಾಮಿ, ಪ್ರಸನ್ನ, ಗುರುಸ್ವಾಮಿ, ಗೋವಿಂದಪ್ಪ, ಪರಮೇಶ್, ದುರ್ಗಮ್ಮ, ಅಂಜಿನಮ್ಮ, ಕಮಲಮ್ಮ, ರತ್ನಮ್ಮ ಇತರರಿದ್ದರು.