ಚಾಮರಾಜನಗರ: ಗ್ಯಾರಂಟಿ ಯೋಜನೆಗಳಿಗೂ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆಗೂ ಗ್ಯಾರಂಟಿಗೂ ಯಾವುದೇ ಸಂಬಂಧ ಇಲ್ಲ. 25 ವರ್ಷದ ಹಿಂದೆ ಇದ್ದ ಬೆಲೆಯನ್ನೇ ಈಗಲು ಮುಂದುವರಿಸಲು ಆಗುತ್ತಾ ಎಂದು ಪ್ರಶ್ನಿಸಿದರು.
ಹಾಲಿನ ದರ 4 ರೂ.ಏರಿಕೆಯಾದ ಹಣವನ್ನು ಸಂಪೂರ್ಣ ರೈತರಿಗೆ ಕೊಡುತ್ತೇವೆ. ಏರಿಕೆ ಮಾಡಿರುವ ಹಣವನ್ನು ರೈತರಿಗೆ ನೀಡಲು ಎಲ್ಲಾ ಹಾಲು ಒಕ್ಕೂಟಗಳಿಗೆ ಸೂಚನೆ ನೀಡಿದ್ದೇವೆ. ಹಾಲು, ಮೊಸರು ಕರೆಂಟು ಎಲ್ಲ ಜಾಸ್ತಿ ಆಯ್ತು ಅಂತ ಬೊಂಬಡಾ ಹೊಡಿತಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ 60 ರೂ.ಇತ್ತು. ಈಗ 103 ರೂ. ಆಗಿದೆ. ಯಾರು ಸಹ ಮಾತನಾಡ್ತಾನೆ ಇಲ್ಲ. ಇದು ಜನರಿಗೆ ಹೊರೆ ಅಲ್ವಾ, ಯಾಕೆ ಯಾರೂ ಕೇಳ್ತಾ ಇಲ್ಲ ಎಂದು ತಿರುಗೇಟು ಕೊಟ್ಟರು.
ಸಚಿವ ರಾಜಣ್ಣ ಹಾಗೂ ಪುತ್ರನ ಹನಿ ಟ್ರ್ಯಾಪ್ ವಿಚಾರಕ್ಕೆ ಮಾತನಾಡಿ, ಈ ಕುರಿತು ನಾನು ಮಾತನಾಡಲ್ಲ. ತನಿಖೆ ಕುರಿತು ನನಿಗೇನು ಗೊತ್ತಿಲ್ಲ ಅವರು ದೂರು ಕೊಟ್ಟಿದ್ದಾರೆ. ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ ಅವರು ಏನು ದೂರು ಕೊಟ್ಟಿದ್ದಾರೊ ಅದರ ಪ್ರಕಾರ ತನಿಖೆಯಾಗುತ್ತೆ, ಹನಿಟ್ರ್ಯಾಪ್ ಮಾಡಿದ್ದಾರೆಂದು ರಾಜಣ್ಣ ಹೇಳಿದ್ದಾರೆ. ತನಿಖೆ ಮಾಡೋಣ ಸತ್ಯಾಸತ್ಯತೆ ಆಚೆ ಬರ್ಲಿ ಎಂದರು.