ಹಾಸನ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಲಂಚಕ್ಕೆ ಸಮಾನ. ತಮ್ಮ ಪಕ್ಷದ ಪರವಾಗಿ ಪ್ರಣಾಳಿಕೆ ಹೆಸರಲ್ಲಿ ಮತದಾರರಿಗೆ ಲಂಚ ಕೊಟ್ಟಿದ್ದಾರೆ. ಇದರ ಹೊಣೆ ಜನರ ಮೇಲೆಯೋ ಅಥವಾ ತೆರಿಗೆ ಪಾವತಿದಾರರ ಮೇಲೆಯೋ ಎಂಬುದನ್ನು ಅವರೇ ಹೇಳಬೇಕು. ಈಗಾಗಲೇ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಮುಂದೆಯೂ ಇಂತಹದ್ದೇ ಬಹಳಷ್ಟು ಆರ್ಥಿಕ ತೊಂದರೆ ಬರಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಗೌರವ ಕಾಪಾಡುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯ. ಆದರೆ, ಕೆಲವರು ನಡೆದುಕೊಂಡಿರುವ ರೀತಿ ಸರಿಯಲ್ಲ. ಸದನದಲ್ಲಿ ವಾದ-ವಿವಾದ ಸಹಜ. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಸ್ಪೀಕರ್ ಅಥವಾ ಉಪಸಭಾಪತಿ ನಿರ್ಧರಿಸುತ್ತಾರೆ. ಇದು ಸಂಪೂರ್ಣ ಬೇಜವಾಬ್ದಾರಿ ವರ್ತನೆಯಾಗಿದೆ. ಒಂದಿಷ್ಟು ಮೌಲ್ಯಗಳು ಸದನ ಸದಸ್ಯರಲ್ಲಿ ಇರಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ. ಸ್ಪೀಕರ್ ಹೇಳಿದ ಮಾತನ್ನು ಸಭೆ ಒಪ್ಪಲೇಬೇಕಾಗುತ್ತದೆ. ಹಾಗೇನಾದರೂ ತಪ್ಪಿದ್ದರೆ ಮಾಧ್ಯಮದ ಮೂಲಕ ಹೇಳಬಹುದಿತ್ತು. ಅದನ್ನು ಬಿಟ್ಟು ಸಭಾ ಶಿಸ್ತು ಮೀರಿ ಆ ವರ್ತನೆ ಪ್ರದರ್ಶಿಸಿದ್ದು ವಿಷಾದನಿಯ ಎಂದರು.
ಜನ ಪ್ರತಿನಿಧಿಗಳಾದವರು ಆ ರೀತಿ ಮಾಡುವುದು ಸರಿಯಲ್ಲ. ನಾವು ಹೇಳಿದ್ದೇ ಸರಿ ಎಂದು ಯಾರೂ ಭಾವಿಸಬಾರದು. ಚರ್ಚೆ, ವಾದ-ವಿವಾದಗಳನ್ನು ಆಲಿಸಿದ ಯಾರಾದರೂ ಒಬ್ಬರು ಅದರ ಬಗ್ಗೆ ತೀರ್ಪು ಕೊಡಬೇಕಾಗುತ್ತದೆ. ಅದು ನಿಮಗೆ ಸರಿ ಕಾಣದಿದ್ದರೆ ಅದನ್ನು ಹೇಳಲು ಬೇರೆ ದಾರಿ ಇರುತ್ತದೆ. ಅದನ್ನು ಹುಡುಕುವ ಬದಲು ಸದನದೊಳಗೆ ಪ್ರತಿಭಟನೆ ಮಾಡುವುದು ಸಮಂಜಸವಲ್ಲ. ಇದರಿಂದ ಸದನ ಸಭೆಯ ಸಮಯ ಹಾಳಾಗುತ್ತದೆ ಎಂದರು.
ಲೋಕಾಯುಕ್ತ ಸಂಸ್ಥೆ ಇದ್ದರೂ ಎಸಿಬಿ ಸ್ಥಾಪನೆ ಮಾಡಿದರು. ಲೋಕಾಯುಕ್ತರ ವಿಚಾರಣೆ ಅಧಿಕಾರವನ್ನೂ ವಾಪಸ್ ಪಡೆದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಅದು ತಪ್ಪು ಎಂದು ನಿರ್ಧರಿಸಿ ಎಸಿಬಿಯನ್ನು ತೆಗೆದು ಹಾಕಿತ್ತು. ಈಗ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ಲಭಿಸಿದೆ. ಈ ಸಂಸ್ಥೆ ತನ್ನ ಕೆಲಸಗಳನ್ನು ಮತ್ತೆ ಆರಂಭಿಸಿದೆ. ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡೋಣ ಎಂದರು.
ವಿರೋಧ ಪಕ್ಷದ ನಾಯಕ ಇಲ್ಲದೆ ಇರುವುದಕ್ಕೂ ಅಧಿವೇಶನಕ್ಕೂ ಏನು ಸಂಬಂಧವಿಲ್ಲ. ವಿರೋಧ ಪಕ್ಷದ ನಾಯಕನಿಲ್ಲದೆ ಕಲಾಪಗಳು ನಡೆಯಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ. ಆದರೆ ಈ ವಿಚಾರದಲ್ಲಿ ಒಂದು ರೀತಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆ ಹುದ್ದೆ ಇರಬೇಕಿತ್ತು. ಎರಡು ತಿಂಗಳಾದರೂ ಆ ಹುದ್ದೆಗೆ ಯಾರನ್ನೂ ಏಕೆ ಆಯ್ಕೆ ಮಾಡಿಲ್ಲ ಎಂದು ನನಗಂತೂ ಗೊತ್ತಿಲ್ಲ ಎಂದು ಹೇಳಿದರು.