ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಗೊಳಿಸಬೇಕು. ಯಾವುದೇ ಫಲಾನುಭವಿಗಳು ವಂಚಿತರಾಗದಂತೆ ನಿಗಾವಹಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರು ಕಾರ್ಯ ನಿರ್ವಹಿಸಬೇಕು ಎಂದರು.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಯೋಜನೆ ಸರಿಯಾಗಿ ತಲುಪಬೇಕು. ಆಹಾರ ಇಲಾಖೆಯ ನಿರೀಕ್ಷರನ್ನು ಬಳಸಿಕೊಂಡು ಫಲಾನುಭವಿಗಳ ಆಧಾರ ನೋಂದಣಿಯ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. ಗೃಹಲಕ್ಷ್ಮಿ ಯೋಜನೆಯಡಿ ಅಂದಾಜು 10.77 ಲಕ್ಷ ಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಹಣ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲತೆ ಹೊಂದಿರುವ ಫಲಾನುಭವಿಗಳನ್ನು ಗುರುತಿಸಿ ಅಂತವರ ಕುರಿತು ಪ್ರಚಾರ ನೀಡಬೇಕು ಎಂದು ಸೂಚಿಸಿದರು.
ಪ್ರತಿವರ್ಷಕ್ಕೆ 531 ಕೋಟಿ ರೂ.: ಜಿಲ್ಲೆಯಲ್ಲಿ ಗೃಹ ಬಳಕೆ ಅಂದಾಜು 10.34 ಲಕ್ಷ ಜನರು 200 ಯುನಿಟ್ ಒಳಗಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. 35 ಸಾವಿರ ಅರ್ಹ ಜನರು ಗೃಹಜ್ಯೋತಿ ಯೋಜನೆ ಬಳಕೆ ಮಾಡುತ್ತಿಲ್ಲ. ಹಾಗಾಗಿ ಅಂತಹವರಿಗೆ ಇದರ ಕುರಿತು ಮಾಹಿತಿ ನೀಡಿ ನೋಂದಣಿ ಮಾಡಿಸಲಾಗುತ್ತಿದೆ. ಪ್ರತಿ ತಿಂಗಳು ಸರಾಸರಿ 40 ಮಿಲಿಯನ್ ಯೂನಿಟ್ ಬಳಕೆ ಮಾಡಲಾಗುತ್ತಿದೆ. ತಿಂಗಳಿಗೆ 38 ಕೋಟಿ ರೂ. ವೆಚ್ಚ ಸರ್ಕಾರ ಭರಿಸುತ್ತಿದೆ. ಪ್ರತಿವರ್ಷಕ್ಕೆ 531 ಕೋಟಿ ರೂ.ಸರ್ಕಾರ ನೀಡುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರತಿದಿನ 4.89 ಲಕ್ಷ ಮಹಿಳೆಯರಿಂದ ಪ್ರಯಾಣ: ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 11.30 ಲಕ್ಷ ಪದವಿ, ಡಿಪ್ಲೋಮಾ ಪದವೀಧರರಿಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ. ಶಕ್ತಿ ಯೋಜನೆಯಡಿ 3 ವಿಭಾಗಗಳಲ್ಲಿ 15 ಘಟಕಗಳಿವೆ. ಪ್ರತಿದಿನ 4.89 ಲಕ್ಷ ಮಹಿಳೆಯರು ಪ್ರಯಾಣಿಸುತ್ತಾರೆ. ಇದಕ್ಕೆ ಸರ್ಕಾರ 1.15 ಕೋಟಿ ವೆಚ್ಚ ಭರಿಸುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಪಂ ಸಿಇ ಒ ರಾಹುಲ ಶಿಂಧೆ, ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜ ಇತರರಿದ್ದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಬಳಕೆ ಮಾಡಿಕೊಂಡು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ಯೋಜನೆಯಿಂದ ಲಾಭ ಪಡೆದವರು ತುಂಬಾ ಜನ ಇದ್ದಾರೆ. ಆದರೆ, ಕೆಲವು ಫಲಾನುಭವಿಗಳಿಗೆ ಆಧಾರ್ ಜೋಡಣೆಯಲ್ಲಿ ಜಿಎಸ್‌ಟಿ ನೋಂದಣಿಯಾಗಿರುವ ಕಾರಣ ಹಲವು ಜನರಿಗೆ ಯೋಜನೆಗಳು ತಲುಪುತ್ತಿಲ್ಲ. ಅಂತಹ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. | ವಿನಯ ನಾವಲಗಟ್ಟಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ