ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ನಾಗರಾಜ ಹದ್ಲಿ, ಆನಂದ ಜಿಗಜಿನ್ನಿ, ರಾಜು ಮನ್ನಿಕೇರಿ, ಸಿಕಂದರ ಅಥಣಿ, ಕಾಶಿನಾಥ ಹುಡೇದ, ಹನುಮಂತ ಡೋಣಿ ಇದ್ದರು. 
ಜಿಲ್ಲೆ

ಗ್ಯಾರಂಟಿ ಯೋಜನೆಗಳಿಗೆ ಸಹಿಸಲಾಗದೇ ಟೀಕೆ

ಬಾಗಲಕೋಟೆ: ರಾಜ್ಯ ಸರ್ಕಾರ ಆಗಸ್ಟ್ನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ೨ ಸಾವಿರ ರೂ. ಹಾಗೂ ಪ್ರತಿಯೊಂದು ಮನೆಗೂ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಆಗಸ್ಟ್ ನಲ್ಲಿ ಜಾರಿಗೊಳಿಸಲಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಸಹಿಸಲಾಗದೇ ಬಿಜೆಪಿ ಟೀಕೆ ಮಾಡುತ್ತಿರುವುದು ಸಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಗ್ಯಾರಂಟಿಗಳ ಲಾಭ ಪಡೆಯಲು ಪಡಿತರ ಚೀಟಿಗೆ ಆಧಾರ್ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಕಡ್ಡಾಯ. ಇಂತಹ ನಿಮಯಗಳನ್ನು ಬಿಜೆಪಿಯವರು ಷರತ್ತು ವಿಧಿಸಿದ್ದಾರೆ ಎಂದು ಹೇಳುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಇವುಗಳು ಷರತ್ತುಗಳಲ್ಲ, ನಿಯಮಗಳು. ಗ್ಯಾರಂಟಿಗಳ ಲಾಭ ಪಡೆಯಬೇಕಾದರೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ೫ ಕೆ.ಜಿ ಹೆಚ್ಚಿನ ಅಕ್ಕಿ ನೀಡಲು ನಿರಾಕರಿಸಿತು. ಇದಕ್ಕೆ ನಮ್ಮ ಸರ್ಕಾರ ಕೈ ಕಟ್ಟಿ ಕೂಡಲಿಲ್ಲ.೫ ಕೆ.ಜಿ ಅಕ್ಕಿ ಬದಲಾಗಿ ಅಕ್ಕಿಗೆ ತಗಲುವ ಮೊತ್ತವನ್ನು ಪಡಿತರ ಚೀಟಿದಾರರಿಗೆ ನೀಡಲು ಪ್ರಾರಂಭಿಸಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಂದಾಜು ೭೭,೮೦,೦೦೦ ರು. ಹಣವನ್ನು ಪಡಿತರ ಚೀಟಿದಾರರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಬಿಜೆಪಿಯವರು ಅಕ್ಕಿ ಬದಲಾಗಿ ಹಣ ನೀಡಬೇಡಿ. ಜನರಿಗೆ ಅಕ್ಕಿಯನ್ನೇ ನೀಡಿ ಎಂದು ಹೇಳುತ್ತಿದ್ದಾರೆ. ಆದರೆ, ಒಬ್ಬರಿಗೆ ತಿಂಗಳಿಗೆ ೫ ಕೆ.ಜಿ ಅಕ್ಕಿ ಸಾಕು. ಉಳಿದ ೫ ಕೆ.ಜಿ ಅಕ್ಕಿಯ ಹಣ ನೀಡುವುದರಿಂದ ನಮಗೆ ಬೇರೆ ಕಿರಾಣಿ ಸಾಮಗ್ರಿ ಖರೀದಿಸಲು ಅನುಕೂಲವಾಗುತ್ತಿದೆ ಎಂದು ಜಿಲ್ಲೆಯಲ್ಲಿ ಪಕ್ಷದಿಂದ ಸರ್ವೇ ಕೈಗೊಂಡಾಗ ಜನರೇ ಈ ರೀತಿ ಸಲಹೆ ನೀಡಿದ್ದಾರೆ. ಕಾರಣ ಸರ್ಕಾರ ಸದ್ಯ ಅಕ್ಕಿ ಬದಲಿಗೆ ಹಣ ನೀಡುತ್ತಿರುವುದನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ನಾಗರಾಜ ಹದ್ಲಿ, ಆನಂದ ಜಿಗಜಿನ್ನಿ, ರಾಜು ಮನ್ನಿಕೇರಿ, ಸಿಕಂದರ ಅಥಣಿ, ಕಾಶಿನಾಥ ಹುಡೇದ, ಹನುಮಂತ ಡೋಣಿ ಇದ್ದರು.