ನಂಜನಗೂಡು: ಸರ್ಕಾರದ ಪಂಚ ಗ್ಯಾರಂಟಿಗಳ ಯೋಜನೆಯಿಂದ ರೈತರು ಬಲಿಪಶುಗಳಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಅಧ್ಯಕ್ಷ ಹಾಡ್ಯ ರವಿ ಆರೋಪಿಸಿದರು.
ತಾಲೂಕಿನ ದೊಡ್ಡ ಕವಲಂದೆ ಹೋಬಳಿ ನಂಜನಹಳ್ಳಿ ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಧಿಕಾರ ಭದ್ರಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಈಗಾಗಲೇ ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟೆಗಳು ಒಂದು ತಿಂಗಳ ಮುಂಚೆ ಭರ್ತಿಯಾಗಿವೆ. ಜಿಲ್ಲೆಗಳ ಕೆರೆ-ಕಟ್ಟೆಗಳು, ನಾಲೆಗಳಿಗೆ ನೀರು ಹರಿಸಬೇಕಾಗಿತ್ತು. ಆದರೆ, ಈ ಕೆಲಸವನ್ನು ಮಾಡದೆ ದಿನ ದೂಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗೋಸ್ಕರ ರೈತರಿಗೆ ಬರಬೇಕಾಗಿದ್ದ 2,000 ಕೋಟಿ ರೂ. ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರೈತರು ಇಂದು ಬಲಿಪಶುಗಳಾಗಿದ್ದಾರೆ. ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದರು ಕೂಡ ಗಮನಹರಿಸುತ್ತಿಲ್ಲ. ಸರ್ಕಾರಗಳನ್ನು ಎಚ್ಚರಿಸಬೇಕು ಎಂಬ ಉದ್ದೇಶದಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮೂಲಕ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು.
ಹಿರಿಯ ಹೋರಾಟಗಾರ ಹೊನ್ನೂರು ಪ್ರಕಾಶ್ ಮಾತನಾಡಿ, ರೈತ ಸಂಘಟನೆಗಳು ರೈತರ ಕಷ್ಟಗಳನ್ನು ಬಗೆಹರಿಸಲು ಶ್ರಮಿಸಬೇಕು. ರೈತರಿಗೆ ಯಾವ ಸರ್ಕಾರಗಳು ಕೂಡ ಸ್ಪಂದಿಸುತ್ತಿಲ್ಲ. ಕಬಿನಿ ಜಲಾಶಯದ ಸುತ್ತ ಅಕ್ರಮವಾಗಿ ರೆಸಾರ್ಟ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಸುಭಾಷ್ ಪವರ್ ಪ್ಲಾಂಟ್ ಅಕ್ರಮ ನಡೆಸಿದರು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪವರ್ ಪ್ಲಾಂಟ್‌ನಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ಇದರ ಜತೆಗೆ ನಂಜನಗೂಡಿನ ಸಾಕಷ್ಟು ಕಾರ್ಖಾನೆಗಳು ವಿಷದ ತ್ಯಾಜ್ಯವನ್ನು ನದಿಗೆ ಹರಿಸುತ್ತಿರುವ ಪರಿಣಾಮ ಇಂದು ನಾವು ತಿನ್ನುತ್ತಿರುವ ಆಹಾರ ಪದಾರ್ಥಗಳು ವಿಷಮಯವಾಗುತ್ತಿವೆ. ಇವುಗಳ ಬಗ್ಗೆ ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಇಂತಹ ವಿಷಯಗಳ ಬಗ್ಗೆ ಸಂಘಟನೆಗಳಿಂದ ಹೋರಾಟ ಮಾಡಿ ಪರಿಸರದಲ್ಲಿ ಆಗುತ್ತಿರುವ ದುಷ್ಪರಿಣಾಮವನ್ನು ತಡೆಯಬೇಕಾಗಿದೆ ಎಂದರು.
ರಾಜ್ಯ ಗೌರವಾಧ್ಯಕ್ಷ ದೇವಿರಮ್ಮನಹಳ್ಳಿ ನಂದೀಶ್, ರಾಜ್ಯ ಖಜಾಂಜಿ ಮಲೆಯೂರು ಹರ್ಷ, ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ಶಿವ ದರ್ಶನ್, ಮರಿಸ್ವಾಮಿ, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಚಿಕ್ಕಸ್ವಾಮಿ, ಮಹೇಶ್, ಮಂಜೇಶ್, ಮಹೇಶ್, ನಾಗೇಶ್, ರವಿ, ಮೂರ್ತಿ, ಪಶುಪತಿ, ಶಾಂತಪ್ಪ, ಚೇತು, ಗುರು, ಹಂಡುವಿನಹಳ್ಳಿ ರವಿ, ಗಣೇಶ್, ಮಾದಪ್ಪ, ಮಹೇಶ್, ಮಂಜು, ಸಿದ್ದಪ್ಪ ಹಾಜರಿದ್ದರು.