ಮೈಸೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಗ್ರಾಮಾಂತರ, ನಗರ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ನುಡಿದಂತೆ ನಡೆಯುವ ಮೂಲಕ ಬಡ ಜನರ, ದೀನ ದಲಿತರ ರಕ್ಷಣೆಗೆ ಒತ್ತಾಸೆಯಾಗಿ ನಿಂತಿದೆ. ಸರ್ಕಾರಕ್ಕೆ ಹೊರೆಯಾದರೂ ಬಡ ಜನರಿಗೆ ನೆರವಾಗಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಪಣ ತೊಟ್ಟಿದ್ದೇವೆ. ಇದರಿಂದ ಮುಂಬರುವ ದಿನಗಳಲ್ಲಿ ಪಕ್ಷ ಬಲಪಡಿಸಲು ಸಹಕಾರಿಯಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕೆಂದು ಸರ್ಕಾರ ಪಣ ತೊಟ್ಟಿದ್ದು, ಕಾರ್ಯಕರ್ತರ ಜವಾಬ್ದಾರಿಯೂ ಇದೆ. ಈ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಟ್ಟು, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಇಂತಹ ಕಾಳಜಿಯುಳ್ಳ ಕಾರ್ಯಕ್ರಮ ಜಾರಿಗೊಳಿಸಲು ಸಾಧ್ಯ ಎಂದು ತಿಳಿಸುವ ಹೊಣೆ ಪಕ್ಷದ ಕಾರ್ಯಕರ್ತರದ್ದಾಗಿದೆ. ಈ ಹಿಂದೆ ಆಡಳಿತ ನಡೆಸಿದವರ ಕಾಲದಲ್ಲಿ ಜನರು ಯಾವ ರೀತಿ ಸಂಕಷ್ಟಕ್ಕೆ ಗುರಿಯಾಗಿದ್ದರು. ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪರಿಸ್ಥಿತಿ ಯಾವ ರೀತಿ ಸುಧಾರಿಸುತ್ತಿದೆ. ಬಡವರಿಗಾಗಿ ಏನೆಲ್ಲ ಕಾರ್ಯಕ್ರಮ ಜಾರಿಗೊಳಿಸಿದ್ದೇವೆ ಎಂದು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಬಡಕುಟುಂಬದಲ್ಲಿ ಜನಿಸಿದ ಮಗುವನ್ನು ದೇಶದ ಸತ್ಪ್ರಜೆಯಾಗಿ ರೂಪಿಸಲು ಕಾಂಗ್ರೆಸ್ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ದೇಶ ಹಾಗೂ ರಾಜ್ಯಕ್ಕೆ ನೀಡಿದ ಕಾರ್ಯಕ್ರಮಗಳು ಹಾಗೂ ಪಕ್ಷದ ನಾಯಕತ್ವದ ಬಗ್ಗೆ ಜನರಿಗೆ ತಿಳಿಸುವ ಅಭಿಯಾನ ನಡೆಸುವ ಮೂಲಕ ಪಕ್ಷ ಬಲಪಡಿಸಲು ಮುಂದಾಗಬೇಕು ಎಂದರು
ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಕ್ತಾರ ಎಂ.ಲಕ್ಷ್ಮಣ್, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಬಿ.ಎಂ.ರಾಮು, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮಾಜಿ ಮೇಯರ್‌ಗಳಾದ ಪುಷ್ಪಲತಾ ಚಿಕ್ಕಣ್ಣ, ಎಂ.ಸಿ.ರಾಜೇಶ್ವರಿ ಪುಟ್ಟಸ್ವಾಮಿ, ಟಿ.ಬಿ.ಚಿಕ್ಕಣ್ಣ, ಬಿ.ಕೆ.ಪ್ರಕಾಶ್, ಮೋದಾಮಣಿ, ದಕ್ಷಿಣಾಮೂರ್ತಿ, ನರಸಿಂಹ ಅಯ್ಯಂಗಾರ್, ಮಾಜಿ ಉಪಮೇಯರ್‌ಗಳಾದ ಪುಷ್ಪವಲ್ಲಿ, ಸಿದ್ದರಾಜು, ಮುಖಂಡರಾದ ಶಿವಣ್ಣ, ಬಸವಣ್ಣ, ಸೋಮಸುಂದರ್ ಇನ್ನಿತರರು ಉಪಸ್ಥಿತರಿದ್ದರು.
6 ವರ್ಷಗಳ ಬಳಿಕೆ ವಿಶ್ವನಾಥ್ ಆಗಮನ
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ 6 ವರ್ಷಗಳ ಬಳಿಕ ಮರಳಿ ಕಾಂಗ್ರೆಸ್ ಕಚೇರಿಗೆ ಬಂದು ಅಚ್ಚರಿ ಮೂಡಿಸಿದರು.
ಅವರ ಆಗಮನದಿಂದ ಕಾರ್ಯಕರ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿತು.
ಸುದೀರ್ಘ ಅವಧಿ ಕಾಂಗ್ರೆಸ್‌ನಲ್ಲೇ ಇದ್ದ ವಿಶ್ವನಾಥ್ ಅವರು ಮರಳಿ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆಯೇ ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಮುಖಂಡರು, ಆತ್ಮೀಯವಾಗಿ ಸ್ವಾಗತ ಕೋರಿ ಕಚೇರಿಗೆ ಕರೆದೊಯ್ದರು. ನಂತರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಶ್ವನಾಥ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಯ ಕಳೆದರು