ಪಿರಿಯಾಪಟ್ಟಣದ ದೇವರಾಜ ಅರಸು ಸಮುದಾಯ ಭವನದಲ್ಲಿ ಸೋಮವಾರ ಸೆಸ್ಕ್ ವತಿಯಿಂದ ಆಯೋಜಿಸಲಾಗಿದ್ದ ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ವಿತರಣಾ ಕಾರ್ಯಕ್ರಮವನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು. ಎನ್.ಎ.ಕುಂಞ ಮಹಮ್ಮದ್, ಸುನೀಲ್, ಪ್ರದೀಪ್, ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು ಇದ್ದರು. 
ಜಿಲ್ಲೆ

ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಿರಿ

ನಾಗೇಶ ಎಸ್

ಪಿರಿಯಾಪಟ್ಟಣ: ನಾವು ಚುನಾವಣಾ ಸಮಯದಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚುತ್ತಿದ್ದಾಗ ತಿರಸ್ಕರಿಸುತ್ತಿದ್ದವರೇ ಇಂದು ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯಲು ಸರತಿ ಸಾಲಿನಲ್ಲಿ ಮುಂದಿದ್ದಾರೆ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಸಮುದಾಯ ಭವನದಲ್ಲಿ ಸೋಮವಾರ ಸೆಸ್ಕ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಿಗೆ 64 ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದ್ದು ಯೋಜನೆಯ ಅನುಕೂಲತೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ನಾವು ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಜಾರಿಗೆ ತಂದಿಲ್ಲ. ರಾಜ್ಯದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ನಾವು ಅಧಿಕಾರ ಹಿಡಿದು ಎಲ್ಲರನ್ನೂ ಉದ್ಧಾರ ಮಾಡುತ್ತೇವೆ ಎಂದು ಹೇಳಲಾಗುವುದಿಲ್ಲ. ಆದರೆ ಐದು ಯೋಜನೆಗಳ ಮೂಲಕ ಬಡವರ, ದೀನ ದಲಿತರ ನೆರವಿಗೆ ಧಾವಿಸುತ್ತಿದ್ದೇವೆ ಎಂಬ ಅರಿವು ನಮಗಿದೆ ಎಂದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳೇ ರಾಜ್ಯದಲ್ಲಿ 15 ದಿನಗಳ ಕಾಲ ಠಿಕಾಣಿ ಹೂಡಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೂ ರಾಜ್ಯದ ಮತದಾರರು ಮರುಳಾಗಲಿಲ್ಲ. ರಾಜ್ಯದ ಜನತೆ ಬುದ್ಧಿವಂತರಾಗಿದ್ದು, ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿಟ್ಟು 135 ಶಾಸಕರನ್ನು ಆಯ್ಕೆ ಮಾಡುವ ಮೂಲಕ ನಮಗೆ ಅಧಿಕಾರ ನೀಡಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಖಂಡಿತ ಮಾಡಲಿದ್ದೇವೆ ಎಂದರು.

ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದಲ್ಲಿ ಈವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 68 ಕೋಟಿ ಪ್ರಯಾಣದ ಟಿಕೆಟ್ ಪಡೆದು ಮಹಿಳೆಯರು ಸಂಚರಿಸಿ ಯೋಜನೆಯ ಸದುಪಯೋಗಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ನಡೆಸಿದ ವಿರೋಧ ಪಕ್ಷಗಳು ನಮ್ಮನ್ನು ಸೋಲಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಅಪಪ್ರಚಾರದಲ್ಲಿ ತೊಡಗಿದ್ದರು. ಆದರೆ ಇದೀಗ ಒಂದೊಂದೇ ಯೋಜನೆ ಜಾರಿಯಾಗುತ್ತಿದ್ದಂತೆ ಆ ಬಗ್ಗೆ ಮಾತನ್ನೇ ಆಡುತ್ತಿಲ್ಲ ಎಂದು ಟೀಕಿಸಿದರು.

ಸೆಸ್ಕ್ ಎಇಇ ಗುರು ಬಸವರಾಜಸ್ವಾಮಿ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ ಈವರೆಗೆ ಒಟ್ಟು 57,504 ಮಂದಿ ನೋಂದಾಯಿಸಿಕೊಂಡಿದ್ದು, ಇನ್ನು ಉಳಿದ ಹತ್ತು ಸಾವಿರ ಮಂದಿ ನೋಂದಾಯಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು ಮಾತನಾಡಿದರು. ತಹಸೀಲ್ದಾರ್ ಎನ್.ಎ.ಕುಂಞ ಮಹಮ್ಮದ್, ತಾ.ಪಂ. ಇಒ ಸುನೀಲ್, ಸೆಸ್ಕ್ ಇಇ ಪ್ರದೀಪ್, ಎಇಇ ಪ್ರಶಾಂತ್, ಪುರಸಭೆ ಮುಖ್ಯಾಧಿಕಾರಿ ಕೆ.ಯು.ಮುತ್ತಪ್ಪ, ಸದಸ್ಯರಾದ ಪ್ರಕಾಶ್, ಮಂಜುನಾಥ್, ರವಿ, ಮಂಜುಳಾರಾಜ್, ರೇವತಿ, ಶಾಮ್, ರತ್ನಮ್ಮ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಈ.ಪಿ.ಲೋಕೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್ ಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.