ಕಳಸ: ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಯನ್ನು ನೂರಕ್ಕೆ ನೂರು ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಾನಂದ ಸ್ವಾಮಿ ಹೇಳಿದರು.
ತಾಪಂನಲ್ಲಿ ಮಂಗಳವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇನ್ನು ಮುಂದೆ ಎರಡು ತಿಂಗಳಿಗೊಮ್ಮೆ ಕಳಸದಲ್ಲಿ ಯೋಜನೆಯ ಸಮಿತಿ ಸಭೆ ನಡೆಸಲಾಗುವುದು ಎಂದರು.
ಕಳಸ ತಾಲೂಕು ಅಧ್ಯಕ್ಷ ಗಣೇಶ್ ಭಟ್ ಮಾತನಾಡಿ, ತಾಲೂಕಿನಲ್ಲಿ ಗ್ಯಾರಂಟಿ ಯೋಜನೆ ತಲುಪದವರನ್ನು ಮತ್ತು ಅರ್ಜಿ ವಿಲೇವಾರಿ ಬಾಕಿ ಇರುವವರನ್ನು ಸಂಪರ್ಕಿಸಿ ಯೋಜನೆಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಪಂ ಇಒ ದಯಾವತಿ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ 7376 ಮಂದಿಗೆ ತಲುಪಿದ್ದು, ಗೃಹಜ್ಯೋತಿ ಯೋಜನೆ 11221 ಫಲಾನುಭವಿಗಳಿಗೆ ತಲುಪಿದೆ. ಅನ್ನಭಾಗ್ಯ ಯೋಜನೆ ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ 24811 ಮಂದಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.
ಕಳಸ-ಬಸರಿಕಟ್ಟೆ- ಶೃಂಗೇರಿಗೆ, ಮೂಡಿಗೆರೆ-ಕಳಸ-ಕುದುರೆಮುಖ-ಕಾರ್ಕಳ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸಬೇಕೆಂಬ ಮನವಿಯನ್ನು ನೀಡಲು ತೀರ್ಮಾನಿಸಲಾಯಿತು.
ಸಮಿತಿ ಸದಸ್ಯರಾದ ಕೇಶವ, ಮಂಜಯ್ಯ, ಶ್ರೀನಿವಾಸ, ಅಬ್ದುಲ್ ಫಾರೂಕ್, ಸುನೀಲ್‌ಕುಮಾರ್, ಎಚ್.ಟಿ.ರಜನಿ, ರೂಪಶ್ರೀ, ಸೌಜಿತ್, ಮಹೇಶ್, ಎ.ಎಂ.ಮಂದಾರ, ಸಂಪತ್, ಸ್ಟೀಪನ್ ಇದ್ದರು.