ಗುಂಡ್ಲುಪೇಟೆ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ತಾಲೂಕಿನ ಜನತೆ ಪರದಾಡುತ್ತಿದ್ದಾರೆ.
ಈಗಾಗಲೇ ಉಚಿತ ವಿದ್ಯುತ್ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಬ್ಯಾಂಕ್ ವಿವರ, ಮೊಬೈಲ್ ನಂಬರ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹಳೆಯ ಆಧಾರ್ ಕಾರ್ಡ್‌ಗಳಿಗೆ ಮೊಬೈಲ್ ಸಂಖ್ಯೆ ಜೋಡಿಸಿ ಸಣ್ಣಪುಟ್ಟ ದೋಷಗಳನ್ನು ತಿದ್ದುಪಡಿ ಮಾಡಿಸದಿದ್ದರೆ ಯೋಜನೆಗಳಿಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ರೇಷನ್ ಕಾರ್ಡುಗಳಲ್ಲಿ ಮೊದಲು ಮನೆಯ ಯಜಮಾನಿಯ ಫೋಟೋ ಇದ್ದರೆ ಮಾತ್ರ ಯೋಜನೆಗೆ ಅರ್ಜಿಸಲ್ಲಿಸಬಹುದು.
ಇದರಿಂದ ಮೊಬೈಲ್ ನಂಬಲ್ ಲಿಂಕ್, ಕೆವೈಸಿ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಜನತೆ ಮುಗಿಬೀಳುತ್ತಿದ್ದಾರೆ. ಈ ತಿದ್ದುಪಡಿಗಳನ್ನು ತಾಲೂಕು ಕಚೇರಿ, ಆಹಾರ ಇಲಾಖೆಯ ಕಚೇರಿ ಹಾಗೂ ನಾಡಕಚೇರಿಗಳಲ್ಲಿ ಮಾತ್ರ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಬೆಳಗ್ಗೆಯೇ ನೂರಾರು ಜನರು ಆಗಮಿಸಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಪಟ್ಟಣದ ತಾಲೂಕು ಕಚೇರಿಯ ಅಟಲ್ ಸೇವಾ ಕೇಂದ್ರ, ಎಲ್ಲ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳ ಎದುರು ಜನತೆ ಸಾಲುಗಟ್ಟಿ ನಿಲ್ಲುತ್ತಿದ್ದು ಸರ್ವರ್ ಸಮಸ್ಯೆಯಿಂದ ದಿನಗಟ್ಟಲೆ ಕಾಯುವಂತಾಗಿದೆ.
ಕಂದಾಯ ಇಲಾಖೆಯ ಕಚೇರಿಗಳಲ್ಲಿ ನೂಕುನುಗ್ಗಲು ತಪ್ಪಿಸುವ ಸಲುವಾಗಿ ಮೊದಲು ಬಂದ 50 ಜನರಿಗೆ ಟೋಕನ್ ವಿತರಿಸಲಾಗುತ್ತಿದೆ. ದೂರದ ಊರುಗಳಿಂದ ತಡವಾಗಿ ಬಂದವರು ಟೋಕನ್ ಸಿಗದೆ ರಾತ್ರಿಯೇ ಬಂದು ತಾಲೂಕು ಕಚೇರಿಯ ಹೊರಾಂಗಣದಲ್ಲಿ ಮಲಗುತ್ತಿದ್ದಾರೆ. ಕೆವೈಸಿ ಆದ ನಂತರ ವಿವಿಧ ಯೋಜನೆಗಳಿಗೆ ನೋಂದಾಯಿಸಲು ಕಾಲಾವಕಾಶ ಬೇಕಾಗುತ್ತಿದೆ. ಆದರೆ, ಜನರು ಏಕಕಾಲಕ್ಕೆ ಅರ್ಜಿ ಹಾಕಲು ಆತುರ ಮಾಡುತ್ತಿದ್ದು, ಸರ್ವರ್ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.