ಬಾಗಲಕೋಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕೆ ಮಾಡುವವರು ಬಡತನ ಹಾಗೂ ಬಡವರ ಕುರಿತು ಮಾಡುವ ದ್ರೋಹ ಹಾಗೂ ಮೋಸ ಎಂದು ಕಲಬುರಗಿ ವಿಭಾಗದ ತಿಂಥಣಿಯ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳು ನಾಡಿನ ಜನತೆಗೆ ಕೊಟ್ಟಿರುವ ಭಾಗ್ಯಗಳೇ ಹೊರತು ಬೇರೆ ಬೇರೆ ರೀತಿಯ ಭಾಗ್ಯಗಳು ಅಲ್ಲ. ರಾಜಕೀಯ ದ್ವೇಷಕ್ಕಾಗಿ ಬಡವರಿಗೆ ತಲುಪುವ ಯೋಜನೆಗಳನ್ನು ಇನ್ನೊಂದು ಹೆಸರಿನಲ್ಲಿ ಕೂಗುವುದು ಬಡವರು ಹಾಗೂ ಬಡತನಕ್ಕೆ ಮಾಡುವ ದ್ರೋಹವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಟೀಕಾಕಾರರ ಬಗ್ಗೆ ಕಿಡಿಕಾರಿದ್ದಾರೆ.
ನೂರು ದಿನ ಪೂರೈಸಿರುವ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಅಭಿನಂದನೆ ತಿಳಿಸಿದ ಶ್ರೀಗಳು, ಜನರ ಆಶಯಗಳನ್ನು ಈಡೇರಿಸುವುದು ಜನಪ್ರತಿನಿಽಗಳು ಹಾಗೂ ಸರ್ಕಾರದ ಉದ್ದೇಶ ಎಂದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಸುಭದ್ರವಾಗಿ ಇರುತ್ತಾ ಎನ್ನುವ ಪ್ರಶ್ನೆಗೆ, ಇದನ್ನು ನಾವು ಹೇಳಲು ಆಗಲ್ಲ ಎಂದು ಚುಟುಕಾಗಿ ಉತ್ತರಿಸಿದರು.