ಜಿಲ್ಲೆ

ಗ್ಯಾರಂಟಿ ಘೋಷಣೆಗೆ ಹರಕೆ ತೀರಿಸಿದ ಅಭಿಮಾನಿಗಳು

ಆರ್.ಕೃಷ್ಣ

ಮೈಸೂರು: ಕಾಂಗ್ರೆಸ್ ಪಕ್ಷ ನುಡಿದಂತೆ ಉಚಿತ ಯೋಜನೆಗಳನ್ನು ಘೋಷಣೆ ಮಾಡಿದ್ದಕ್ಕೆ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಹಿನ್ನೆಲೆಯಲ್ಲಿ ಕಾಳಿಸಿದ್ದನಹುಂಡಿಯಿಂದ ಚಾಮುಂಡಿಬೆಟ್ಟಕ್ಕೆ ಕಾರ್ಯಕರ್ತರು, ಅಭಿಮಾನಿಗಳು ಶುಕ್ರವಾರ ಪಾದಯಾತ್ರೆ ನಡೆಸಿ 1001 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ಸಿದ್ದರಾಮಯ್ಯ ಅವರು ಗೆದ್ದು ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತಿದ್ದ ಕಾಳಿಸಿದ್ದನಹುಂಡಿಯ ಮಹಿಳೆಯರು ಊರಿನಿಂದ ಪಾದಯಾತ್ರೆ ಮೂಲಕ ಚಾಮುಂಡಿಬೆಟ್ಟಕ್ಕೆ ಆಗಮಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಕಾಳಿಸಿದ್ದನಹುಂಡಿಯ ಕಾಂಗ್ರೆಸ್ ಮುಖಂಡ ಜೈಸ್ವಾಮಿ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರತಿನಿಧಿ ನಾಗಮ್ಮ, ಇತರ 50ಕ್ಕೂ ಹೆಚ್ಚು ಜನರ ತಂಡ 25 ಕಿ.ಮೀ. ಪಾದಯಾತ್ರೆ ನಡೆಸಿತು. ದಾರಿ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಹಿಡಿದುಕೊಂಡು ಜೈಕಾರ ಕೂಗುತ್ತ ಸಾಗಿದರು.
ಸಂಘದ ಸದಸ್ಯೆ ಜಯಮ್ಮ ಮಾತನಾಡಿ, ನಾವು ದೇವರನ್ನು ನೋಡಿಲ್ಲ. ಆದರೆ ಸಿದ್ದರಾಮಯ್ಯ ಅವರು ಕಣ್ಣಿಗೆ ಕಾಣುವ ಭಗವಂತರಾಗಿ ಬಡವರ ಹಸಿವನ್ನು ನೀಗಿಸಿದ್ದಾರೆ. ಉಚಿತ ಯೋಜನೆ ಅಲ್ಲದೇ, ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಿರುವುದಕ್ಕೆ ಇನ್ನು 4 ಶುಕ್ರವಾರ ಪಾದಯಾತ್ರೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ಜೈಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರು ನುಡಿದಂತೆ ನಡೆದ ಏಕೈಕ ನಾಯಕರು. ಬಡವರ, ಹಸಿದವರ, ದೀನದಲಿತರ ಆಪತ್ಬಾಂಧವರಾಗಿದ್ದಾರೆ. ಇನ್ನು 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.
ಮುಖಂಡರಾದ ನಾಡನಹಳ್ಳಿ ರವಿ, ರಾಮನಹುಂಡಿ ಎಚ್.ಜೆ.ಸ್ವಾಮಿ, ಸಿದ್ದರಾಮ, ಮಹಾದೇವು, ಶಿವಣ್ಣ, ಮಮತಾ ರೇವಮ್ಮ, ನಾಗಮ್ಮ, ಚಿಕ್ಕೋಳಮ್ಮ ಇತರರು ಇದ್ದರು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅನ್ನಸಂತರ್ಪಣೆ ನಡೆಸಲಾಯಿತು.