ಗುಂಡ್ಲುಪೇಟೆ: ಕಾಂಗ್ರೆಸ್ ಮುಳುಗುವ ಹಡಗು, ಆ ಪಕ್ಷದವರು ನೀಡುವ ಯಾವುದೇ ಗ್ಯಾರಂಟಿ ಕಾರ್ಡ್‌ಗಳಿಂದಲೂ ಯಾರಿಗೂ ಉಪಯೋಗವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಮಂಗಳವಾರ ಪಕ್ಷದ ಅಭ್ಯರ್ಥಿ, ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಪರ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಈ ಬಾರಿ ತಾಲೂಕಿನಲ್ಲಿ ನಿರಂಜನ್ ಕುಮಾರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ರಾಜಕೀಯ ದೊಂಬರಾಟ ನಡೆಯುವುದಿಲ್ಲ. ಇಂದಿನ ಯುವ ಜನತೆ ಬಹಳ ಬುದ್ಧಿವಂತರಾಗಿದ್ದು, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ, ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 30 ಸಾವಿರ ಮತಗಳ ಅಂತರದಿಂದ ವಿರೋಧ ಪಕ್ಷದ ಅಭ್ಯರ್ಥಿಯನ್ನು ಸೋಲಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದರು.
ಬಿಜೆಪಿ ಪ್ರಣಾಳಿಕೆಯಂತೆ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಬಿಪಿಎಲ್ ಕುಟುಂಬಗಳಿಗೆ 3 ಉಚಿತ ಸಿಲಿಂಡರ್, ಪ್ರತಿದಿನ ಅರ್ಧ ಲೀಟರ್ ಹಾಲು, 5 ಕೆಜಿ ಸಿರಿಧಾನ್ಯ ಮತ್ತು ಹಾಲಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗಾಗಲೇ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾತಿ ಹೆಚ್ಚಳ ಮಾಡಿ, ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ದೇಶವನ್ನು ಒಗ್ಗೂಡಿಸಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದು ಮುಂದು ನೋಡುವ ಇಂದಿನ ದಿನದಲ್ಲಿ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿ ಕಾರ್ಯಕರ್ತರು ಉಳಿದಿರುವ 8 ದಿನಗಳಲ್ಲಿ ಮತದಾರರ ಮನೆಮನೆಗಳಿಗೆ ಹೋಗಿ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ಜನರಿಗೆ ತಿಳಿಸಿ ನಿರಂಜನ್ ಕುಮಾರ್ ಪರ ಮತಹಾಕುವಂತೆ ಮನವೊಲಿಸಬೇಕು ಎಂದು ಸಲಹೆ ನೀಡಿದರು.
ಅಭ್ಯರ್ಥಿ ನಿರಂಜನ್ ಕುಮಾರ್ ಮಾತನಾಡಿ, ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಸ್ಥಾನ ದೊರೆತರೂ ಅಧಿಕಾರದಿಂದ ವಂಚಿತರಾದೆವು. ಆದರೂ ಧೃತಿಗೆಡದ ಛಲದಂಕ ಮಲ್ಲ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯನ್ನ್ನು ಅಧಿಕಾರಕ್ಕೆ ತಂದರು. ಬರಡು ಜಿಲ್ಲೆಯಾದ ಚಾಮರಾಜನಗರಕ್ಕೆ 212 ಕೋಟಿ ರೂ. ಅನುದಾನ ನೀಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ಸಹಕರಿಸಿದರು. ಯಡಿಯೂರಪ್ಪ ಎಂದರೆ ಕೊಟ್ಟ ಮಾತಿಗೆ ತಪ್ಪದ ನಾಯಕ. ಸತತವಾಗಿ 3 ಚುನಾವಣೆ ಸೋತ ನನಗೆ ಧೈರ್ಯ ತುಂಬಿದರು. ಯುವ ಜನತೆಯ ನಾಯಕ ಅಂದರೆ ಅದು ಯಡಿಯೂರಪ್ಪ ಎಂದು ಗುಣಗಾನ ಮಾಡಿದರು.
ಬಿಜೆಪಿ ಮಂಡಲಾಧ್ಯಕ್ಷ ಜಗದೀಶ್, ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಿರಿಕಾಟಿ ಸೋಮಶೇಖರ್, ಮಾಜಿ ಅಧ್ಯಕ್ಷ ಜಿ.ಡಿ.ಎಲ್. ಸುರೇಶ್, ಮುಖಂಡರಾದ ಹೊರೆಯಾಲ ಕೃಷ್ಣ, ಕಮರಹಳ್ಳಿ ರವಿ, ನಾಗೇಶ್, ಕೊಡಸೋಗೆ ಶಿವಬಸಪ್ಪ, ನವೀನ್ ಮೌರ್ಯ, ಸೋಮಹಳ್ಳಿ ಗುರುಪ್ರಸಾದ್, ಅಗತಗೌಡನಹಳ್ಳಿ ಬಸವರಾಜು, ನಿಟ್ರೆ ನಾಗರಾಜಪ್ಪ, ಕೋಡಹಳ್ಳಿ ಮಹದೇವಶೆಟ್ಟಿ ಇನ್ನಿತರರು ಇದ್ದರು.