???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಗ್ಯಾರಂಟಿ, ಅಭಿವೃದ್ಧಿ ಮುಂದಿಟ್ಟು ಮತ ಭಿಕ್ಷೆ ಕೇಳ್ತೀವಿ: ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ

ಮಾಗಡಿ :  ಚನ್ನಪಟ್ಟಣ ಉಪಚುನಾವಣೆಯಲ್ಲಿ ಗ್ಯಾರಂಟಿ, ಅಭಿವೃದ್ಧಿ ಕೆಲಸ ಮುಂದಿಟ್ಟು ಜನರ ಬಳಿ ಸಹಾಯ ಮಾಡಿ ಎಂದು ಮತ ಭಿಕ್ಷೆ ಕೇಳುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಕೃಷಿ ಇಲಾಖೆ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ. ನಮಗೆ ಏನು ಶಕ್ತಿ ಇದೆ ಅಂತ ಚನ್ನಪಟ್ಟಣದ ಜವಾಬ್ದಾರಿ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು. ಜನರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ಹೋಗುತ್ತೇವೆ. ಆದರೂ ದೊಡ್ಡ ನಾಯಕರ ವಿರುದ್ಧ ಸ್ಪರ್ಧೆ ಮಾಡಬೇಕಾಗಿದೆ, ಕಾದು ನೋಡೊಣ ಎಂದರು.

ಡಿಕೆಶಿ ಹೊಸ ಅಧ್ಯಾಯ ಚನ್ನಪಟ್ಟಣದಲ್ಲಿ ಅಂತ್ಯ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಮಾತಿನ ಅರ್ಥ ಯಾರಿಗೆ ಅಂತ ಗೊತ್ತಿಲ್ಲ. ಯಾರದ್ದು ಎಲ್ಲಿಂದ ಶುರುವಾಯ್ತು, ಎಲ್ಲಿಗೆ ಮುಕ್ತಾಯ ಅಂತ ಅವರನ್ನೇ ಫೋನ್ ಮಾಡಿ ಕೇಳುತ್ತೇನೆ ಎಂದು ಸಿಪಿವೈಗೆ ಟಾಂಗ್ ನೀಡಿದರು.

ಚನ್ನಪಟ್ಟಣಕ್ಕೆ ಯಾರು ಅಭ್ಯರ್ಥಿ ಎಂದು ಹೈಕಮಾಂಡ್, ಸಿಎಂ, ಡಿಸಿಎಂ ತೀರ್ಮಾನ ಮಾಡುತ್ತಾರೆ. ಚುನಾವಣೆಗೆ ಇನ್ನೂ ಸಮಯ ಇದೆ ಎಂದರು.

ಡಿಕೆ ಗ್ಯಾಂಗ್ ಎಂಬ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಪಿ. ಯೋಗೇಶ್ವರ್ ಸರ್ಕಾರ ರಚನೆ ಮಾಡಿದ್ರು, ಸರ್ಕಾರವನ್ನೂ ತೆಗೆದ್ರು. ಸಿಎಂ ಕ್ಯಾಂಡಿಡೇಟ್ ಆದ್ರ್ರು. ಈ ಭಾಗದ ಒಕ್ಕಲಿಗ ನಾಯಕ. ಆದರೂ ಯೋಗೇಶ್ವರ್ ಸ್ಪೀಡ್ ಯಾವ ರೀತಿ ಇದೆ ಅಂತ ನಾನು ನೋಡುತ್ತಿದ್ದೇನೆ. ಅವರು ಆತ್ಮೀಯರು, ಅವರು ಇದೇ ಸ್ಪೀಡ್‌ನಲ್ಲಿ ಹೋಗಲಿ ಎಂದರು.

ನಾಲೆಗಳಿಗೆ ಶೀಘ್ರ ನೀರು: ಕಾವೇರಿ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, 87 ಅಡಿ ನೀರು ಇದ್ದಾಗ ಯಾವಾಗಲೂ ಹರಿಸಿಲ್ಲ. 100 ಅಡಿ ತಲುಪಿದಾಗ ಜುಲೈ ಎರಡನೇ ವಾರದಲ್ಲಿ ನೀರು ಬಿಟ್ಟಿದ್ದಾರೆ. ಆದರೆ, ಜನರ ಬೇಡಿಕೆಗಾಗಿ 85 ಅಡಿ ಇದ್ದರೂ ಸದ್ಯದಲ್ಲೇ ನೀರು ಬಿಡುತ್ತೇವೆ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಸಿ.ಪಿ. ಯೋಗೇಶ್ವರ್ ಹೇಳಿಕೆಗಳಿಗೆ ಅಷ್ಟೊಂದು ಬೆಲೆ ಕೊಡೋದು ಸೂಕ್ತ ಅಲ್ಲ. ಚುನಾವಣೆ ಬಗ್ಗೆ ಅವರಿಗೆ ಭಯ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಸುಮ್ಮನೆ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡುವುದು ಸರಿಯಲ್ಲ ಎಂದು ಸಿಪಿವೈಗೆ ಟಾಂಗ್ ನೀಡಿದರು.

600 ನೌಕರರ ನೇಮಕ ಶೀಘ್ರ : ಮಾಗಡಿ: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 600 ನೌಕರರನ್ನು ಶೀಘ್ರ ನೇಮಕ ಮಾಡುವುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ನೇತೃತ್ವದಲ್ಲಿ ನೂರಾರು ರೈತರು ನೀಡಿದ ಮನವಿಗೆ ಸ್ಪಂದಿಸಿದ ಅವರು, ಕೃಷಿ ಇಲಾಖೆಯಲ್ಲಿ 20 ವರ್ಷದಿಂದ ನೌಕರರ ಸಮಸ್ಯೆ ಕಾಡುತ್ತಿದೆ. ಕೃಷಿ ಇಲಾಖೆಯಲ್ಲಿ ಶೇ.57, ಇತರ ಇಲಾಖೆಯಲ್ಲಿ ಶೇ. 60 ನೌಕರರ ಕೊರತೆ ಇದೆ. ಹಂತ, ಹಂತವಾಗಿ ಪ್ರತಿ ವರ್ಷ ನೌಕರರ ಕೊರತೆ ನೀಗಿಸುವ ಕೆಲಸ ಮಾಡಲು ತೀರ್ಮಾನಿಸಿ ಲೋಕಸಭಾ ಚುನಾವಣೆ ಮುನ್ನ 600 ಮಂದಿಯನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿ ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನರ್‌ಗೆ ಬರೆಯಲಾಗಿದೆ. ಇನ್ನೂ 4 ತಿಂಗಳ ಒಳಗೆ ನೇಮಕಾತಿ ಮಾಡಲಾಗುವುದು ಎಂದರು.

ಕೃಷಿ ಭಾಗ್ಯ ಮುಂದುವರಿಸಲಾಗುತ್ತಿದೆ. ಕೃಷಿ ಪ್ರಾಧಿಕಾರ ಮಾಡಲಾಗುತ್ತಿದೆ, ಒಳ್ಳೆಯ ಕೆಲಸ ಮಾಡಿದವರನ್ನೂ ಜನರು ಗೆಲ್ಲಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಂತ ಕೆಲಸ ಮಾಡುವುದು ನಿಲ್ಲಿಸಲು ಸಾಧ್ಯವಿಲ್ಲ ಎಂದರು.