ಯಲ್ಲಾಪುರ: ಪಟ್ಟಣದ ಗೌಸಿಯಾ ಮಸೀದಿಯಲ್ಲಿ ಹಣಕಾಸಿನ ಅವ್ಯವಹಾರವಾಗಿದ್ದು, ಈ ಕುರಿತು ತನಿಖಾಧಿಕಾರಿಗಳ ಮೂಲಕ ಪಾರದರ್ಶಕ ತನಿಖೆ ನಡೆಸಬೇಕೆಂದು ತಾಮೀರ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್ ಎ. ಶೇಖ್ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಅವರು, ಗೌಸಿಯಾ ಮಸೀದಿಯಲ್ಲಿ ಕಳೆದ 7 ವರ್ಷಗಳಿಂದ ಕೆಲವರು ಒತ್ತಾಯಪೂರ್ವಕವಾಗಿ ಸಮಿತಿ ರಚಿಸಿಕೊಂಡಿದ್ದು, ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದವರನ್ನು ಪದಾಧಿಕಾರಿ ಹುದ್ದೆಗೆ ನೇಮಿಸಿಕೊಂಡಿದ್ದಾರೆ. ವಕ್ಪ್ ಬೋರ್ಡ್ನ ಗಮನಕ್ಕೆ ತರದೇ ಹಣಕಾಸಿನ ವ್ಯವಹಾರ ನಡೆಸಿದ್ದು, ಅದರ ಮಾಹಿತಿಯನ್ನು ಬೋರ್ಡ್ಗೆ ನೀಡಿಲ್ಲ. ಮಸೀದಿಯ ಶಾದಿ ಮಹಲ್, ಬಾಡಿಗೆ ಮನೆ, ಪಾತ್ರೆಗಳ ಬಾಡಿಗೆ, ಧಾರ್ವಿುಕ ಕಾರ್ಯಕ್ರಮಗಳಿಂದ ಆದಾಯ ಬರುತ್ತಿದ್ದು, ಅದರ ಲೆಕ್ಕಪತ್ರಗಳನ್ನೂ ವಕ್ಪ್ ಬೋರ್ಡ್ಗೆ ನೀಡಿಲ್ಲ ಎಂದು ದೂರಿದ್ದಾರೆ.
ಸದ್ಯ ಮಸೀದಿಯ ನೋಟಿಸ್ ಬೋರ್ಡ್ಗೆ ಲೆಕ್ಕಪತ್ರ ಅಂಟಿಸಿದ್ದು, ಅದರಲ್ಲಿ ಅಗತ್ಯ ಖರ್ಚಿಗಿಂತ 3-4 ಪಟ್ಟು ಹೆಚ್ಚಿನ ಖರ್ಚು ತೋರಿಸಲಾಗಿದೆ. ಮಸೀದಿಯ ಹಣ ದುರುಪಯೋಗಪಡಿಸಿಕೊಂಡ ಗುಮಾನಿ ಇದ್ದು, ಈ ಅವ್ಯವಹಾರದಿಂದಾಗಿ ಮಸೀದಿಯ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಂದಿಲ್ಲ. ಬೇರೆಲ್ಲ ಮಸೀದಿಗಳಿಗೆ ಅನುದಾನ ಬಂದಿದ್ದರೂ ಗೌಸಿಯಾ ಮಸೀದಿ ಹಿಂದೆ ಬೀಳುವಂತಾಗಿದೆ. ಕಾರಣ ಈ ಅವ್ಯವಹಾರದ ಕುರಿತು ಸೂಕ್ತ ತನಿಖೆಯಾಗಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.