ಗೌರಿಬಿದನೂರು : ನಗರಸಭೆ ಚುನಾಯಿತ ಮಂಡಳಿ ಅಸ್ಥಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ನಗರದಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.
ಗಾಯತ್ರಿ ಬಸವರಾಜ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಆರ್.ಪಿ.ಗೋಪಿನಾಥ್, ಖಾತೆಗಳ ಬದಲಾವಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪಕ್ಕದ ಮಧುಗಿರಿಯಲ್ಲಿ ನಿಗದಿತ ಕಾಲಮಿತಿಯಲ್ಲಿ ಕೆಲಸ ಆಗುತ್ತಿದೆ. ಆದರೆ ಇಲ್ಲಿ ಆನ್‌ಲೈನ್ ಸಮಸ್ಯೆ ಎನ್ನುತ್ತಾರೆ ಎಂದು ಕಿಡಿಕಾರಿದರು.
ವಿನಾಕಾರಣ ಅರ್ಜಿದಾರರನ್ನು ಕಚೇರಿಗೆ ಅಲೆದಾಡಸಬೇಡಿ. ಅರ್ಜಿ ಪಡೆಯುವಾಗ ದಾಖಲೆಗಳನ್ನು ಪರಿಶೀಲಿಸಿ. ಒಂದು ವೇಳೆ ಬದಲಾವಣೆ ಸಾಧ್ಯವಾಗದಿದ್ದಲ್ಲಿ ತ್ವರಿತವಾಗಿ ಹಿಂಬರಹ ನೀಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕರು , 2020-21 ಸಾಲಿನ ವೈದ್ಯಕೀಯ ವೆಚ್ಚ, ಸಣ್ಣ ಉದ್ದಿಮೆಗಾಗಿ ಧನಸಹಾಯಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಸೌಲಭ್ಯ ವಿತರಿಸುವಂತೆ ಸೂಚಿಸಿದರು.
ಜಲಗಾರರ ವೇತನಕ್ಕೆ ಆಗ್ರಹ: ಗ್ರಾಮ ಪಂಚಾಯಿತಿಯಿಂದ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಜಲಗಾರರಿಗೆ ವೇತನ ನೀಡುತ್ತಿಲ್ಲ. ತಿಂಗಳುಗಳು ಕಳೆದರೂ ಸಂಬಳ ನೀಡದಿದ್ದರೆ ಅವರ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ. ಕೂಡಲೇ ಅವರಿಗೆ ವೇತನ ನೀಡಬೇಕು ಎಂದು ಸದಸ್ಯರಾದ ರಮೇಶ್, ರಾಜಕುಮಾರ್, ವೆಂಕಟರೆಡ್ಡಿ, ಸುಬ್ಬರಾಯಪ್ಪ ಒತ್ತಾಯಿಸಿದರು. ನಗರಸಭೆ ವ್ಯಾಪ್ತಿಗೆ ಹಳ್ಳಿಗಳು ಸೇರ್ಪಡೆಯಾಗಿರುವುದರಿಂದ ಪ್ರತಿ ವರ್ಷ 30 ಕೋಟಿ ರೂ. ಅನುದಾನ ಬರುತ್ತದೆ. ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಆಡಳಿತ, ಪ್ರತಿಪಕ್ಷ ಎನ್ನದೆ ಎಲ್ಲ ಸದಸ್ಯರು ಸಹಕರಿಸಬೇಕೆಂದು ಶಾಸಕ ಶಿವಶಂಕರ್‌ರೆಡ್ಡಿ ಮನವಿ ಮಾಡಿದರು. ಸಭೆ ಆರಂಭಕ್ಕೂ ಮುನ್ನ ನೂತನ ಸದಸ್ಯರಿಗೆ ಆಯುಕ್ತ ಜಿ.ಎಂ.ಚಲಪತಿ ಪ್ರಮಾಣ ವಚನ ಬೋಧಿಸಿದರು.
ಕೊಳವೆಬಾವಿ ದುರಸ್ತಿಗೆ ಆಗ್ರಹ : 1ನೇ ವಾರ್ಡ್‌ನಲ್ಲಿರುವ 8 ಕೊಳವೆಬಾವಿಗಳ ಪೈಕಿ 5 ಕೆಟ್ಟು ಹಲವು ದಿನಗಳು ಕಳೆದಿದ್ದರೂ ದುರಸ್ತಿ ಮಾಡಿಲ್ಲ, ನೀರಿನ ಸಮಸ್ಯೆ ಹೆಚ್ಚಾಗಿದೆ. ವಾರ್ಡ್ ನಿವಾಸಿಗಳಿಗೆ ನಾವು ಏನ್ ಉತ್ತರ ಹೇಳ್ಬೇಕು ಎಂದು ಸದಸ್ಯೆ ರಾಜೇಶ್ವರಿ ಪ್ರಶ್ನಿಸಿದರು. 15ವಾರ್ಡ್‌ನಲ್ಲೂ ಕೊಳವೆಬಾವಿ ಕೆಟ್ಟು 15 ದಿನ ಕಳೆದರೂ ದುರಸ್ತಿಯಾಗಿಲ್ಲ ಎಂದು ಸದಸ್ಯೆ ಮುಮಿನತಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಧ್ವನಿಗೂಡಿಸಿದ ಸದಸ್ಯ ಗೋಪಿನಾಥ್, ಹಲವೆಡೆ ಬೋರ್‌ವೆಲ್‌ಗಳು ಮೋಟಾರ್ ಕೆಟ್ಟಿವೆ. ತಲಾ 15 ವಾರ್ಡ್‌ಗಳಂತೆ ಪ್ರತ್ಯೇಕಿಸಿ ಟೆಂಡರ್ ಕರೆಯುವ ಮೂಲಕ 48 ಗಂಟೆಯೊಳಗೆ ದುರಸ್ತಿಗೊಳಿಸುವಂತೆ ಸಲಹೆ ನೀಡಿದರು, ಇದಕ್ಕೆ ಆಯುಕ್ತ ಚಲಪತಿ ಸಹಮತ ವ್ಯಕ್ತಪಡಿಸಿದರು.
ಶಾಸಕರ ಕೈ ಸೂಚನೆಗೆ ಆಕ್ಷೇಪ : ನೂತನ ಬಡಾವಣೆ ವಸತಿ ವಿನ್ಯಾಸ ನಕ್ಷೆ ಅನುಮೋದನೆ ವಿಚಾರಕ್ಕೆ ಬಿಜೆಪಿ ಸದಸ್ಯ ಮಾರ್ಕೆಟ್ ಮೋಹನ್, ಜೆಡಿಎಸ್ ಸದಸ್ಯೆ ಪದ್ಮಾವತಮ್ಮ, ಫರೀದ್ ಆಕ್ಷೇಪ ವ್ಯಕ್ತಪಡಿಸಿದರು. ಮೊದಲು ಬಡಾವಣೆ ಪರಿಶೀಲನೆ ನಡೆಸಿ ಎಲ್ಲ ರೀತಿಯ ಸೌಕರ್ಯ ಕಲ್ಪಿಸಬೇಕು. ಮುಂದಿನ ಸಭೆ ವೇಳೆಗೆ ಪರಿಶೀಲನೆ ಮಾಡಿ ಅನುಮೋದನೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು, ಆದರೆ ಶಾಸಕರ ಸಮ್ಮುಖದಲ್ಲಿ ಅನುಮೋದನೆ ಪಡೆಯಲು ಆಡಳಿತ ಪಕ್ಷದ ಸದಸ್ಯರು ನಿರ್ಧರಿಸಿದರು. ಅನುಮೋದನೆ ಪರ ಇರುವವರು ಕೈ ಎತ್ತುವಂತೆ ಶಾಸಕರು ಸೂಚಿಸಿದರು. ಆಡಳಿತ ಪಕ್ಷದ ಕೆಲ ಸದಸ್ಯರೇ ಕೈ ಎತ್ತಲು ಹಿಂದೇಟು ಹಾಕಿದ್ದರಿಂದ ಕೈ ಎತ್ತುವಂತೆ ಶಾಸಕರು ಸೂಚಿಸಿದರು. ಇದಕ್ಕೆ ಸದಸ್ಯೆ ಮುಮಿನ್ ತಾಜ್ ಆಕ್ಷೇಪ ವ್ಯಕ್ತಪಡಿಸಿ, ಶಾಸಕರು ಸದಸ್ಯರ ಮೇಲೆ ಒತ್ತಡ ಹೇರಬಾರದು ಎಂದರು.