ಜಿಲ್ಲೆ

ಗೌರಿಬಿದನೂರಲ್ಲಿ ಕಾಂಗ್ರೆಸ್ ಬೇರುಗಳು ಗಟ್ಟಿಯಾಗಿವೆ;  ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿಕೆ

ಗೌರಿಬಿದನೂರು: ಗೌರಿಬಿದನೂರು ತಾಲೂಕಿನಲ್ಲಿ ಕಾಂಗ್ರೆಸ್ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್‌ಗೆ ತಾಲೂಕಿನಲ್ಲಿರುವ ಇತಿಹಾಸ ಹಾಗೂ ಅಭಿವೃದ್ಧಿ ಶ್ರೀರಕ್ಷೆಯಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ತಾಲೂಕಿನ ತೊಂಡೇಬಾವಿಯಲ್ಲಿ ಭಾನುವಾರ ಹೋಬಳಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಬೇರುಗಳು ಗಟ್ಟಿಯಾಗಿವೆ. ಕಳೆದ ಗ್ರಾಪಂ ಚುನಾವಣೆಯಲ್ಲಿ ತೊಂಡೆಬಾವಿ ಹೋಬಳಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಳ್ಳಿ ಹಳ್ಳಿಗೆ ಭೇಟಿ ನೀಡಿ ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಗೆಲುವು ಪಡೆಯಲು ಪಕ್ಷ ಸಂಘಟಿಸಬೇಕಿದೆ ಎಂದರು.

ಮಾಜಿ ಶಾಸಕ ದಿವಂಗತ ಬಿಎನ್‌ಕೆ ಪಾಪಯ್ಯ ಅವರ ಪುತ್ರ ಬಿ.ಪಿ.ಅಶ್ವತ್ಥನಾರಾಯಣಗೌಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ. ಅವರು ತಂದೆಯಂತೆ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುವ ಮೂಲಕ ಪಕ್ಷ ಸಂಘಟಿಸಬೇಕು ಎಂದರು.ಗೌರಿಬಿದನೂರು ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 12 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಸಚಿವ ಅಶ್ವತ್ಥನಾರಾಯಣ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ ನಾರಾಯಣಗೌಡ ಮಾತನಾಡಿ, ತೊಂಡೇಬಾವಿ ಹೋಬಳಿಯಲ್ಲಿ ನಮ್ಮ ತಂದೆ, ಮಾಜಿ ಶಾಸಕ ದಿವಂಗತ ಬಿಎನ್‌ಕೆ ಪಾಪಯ್ಯ ಅವರ ಸೇವೆಯ ಬಗ್ಗೆ ಇಂದಿಗೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದ್ದು, ಪ್ರಾಮಾಣಿಕವಾಗಿ ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಪುಟ್ಟಸ್ವಾಮಿಗೌಡ ಬಣದಿಂದ ಬೇಸತ್ತು ಹಲವು ಮುಖಂಡರು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ನೂತನವಾಗಿ ಆಯ್ಕೆಯಾಗಿರುವ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವೇದಲವೇಣಿ ವೇಣು ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಪಿ.ಅಶ್ವತ್ಥನಾರಾಯಣಗೌಡ ಅವರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರಮಣ, ನಗರಸಭೆ ಸದಸ್ಯರಾದ ರಮೇಶ್, ಎಸ್‌ಸಿ ಘಟಕದ ಅಧ್ಯಕ್ಷ ಸೋಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಗಿರೀಶ್‌ರೆಡ್ಡಿ, ನರಸಿಂಹಮೂರ್ತಿ, ಶ್ರೀನಿವಾಸ್, ಮರಳೂರು ಹನುಮಂತರೆಡ್ಡಿ, ಪ್ರಕಾಶ್‌ರೆಡ್ಡಿ, ಗಂಗಾಧರಪ್ಪ, ತಾರಾನಾಥ್, ಸುಮನ, ಮಮ್ತಾಜ್ ಅಲಿ, ತರಿದಾಳು ಚಿಕ್ಕಣ್ಣ, ಅಸ್ಲಾಂ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವೇದಲವೇಣಿ ವೇಣು ಉಪಸ್ಥಿತರಿದ್ದರು.

ಅಭಿವೃದ್ಧಿ ಸ್ಥಗಿತ: ಬಿಜೆಪಿ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಎರಡು ವರ್ಷಗಳಿಂದ ಅನುದಾನ ಬರುತ್ತಿಲ್ಲ, ಇದರಿಂದ ಜನತೆಗೆ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂಪಾಯಿ ಬಿಡುಗಡೆಗೊಳಿಸಿದರು. ಬಿಜೆಪಿ ಸರ್ಕಾರ ಬಂದ ನಂತರ ಯಾವುದೇ ಹಣ ನೀಡಿಲ್ಲ, ಜತೆಗೆ ಕಾಮಗಾರಿಯ ಬಿಲ್ 2600 ಕೋಟಿ ರೂಪಾಯಿ ಬಿಡುಗಡೆಯಾಗದೆ ಕಾಮಗಾರಿ ನಿಂತಿದೆ ಎಂದು ಶಿವಶಂಕರರೆಡ್ಡಿ ಆರೋಪಿಸಿದರು.

ನಾನು ವಲಸಿಗರಿಂದ ವಿಚಲಿತಗೊಂಡಿಲ್ಲ. ನನಗೆ ರಾಜಕೀಯ ಅನುಭವವಿದ್ದು, ಜನಸೇವೆ ಮೂಲಕ ಚುನಾವಣೆ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ. ಎನ್.ಎಚ್.ಶಿವಶಂಕರರೆಡ್ಡಿ, ಶಾಸಕ