ಚಿತ್ರದುರ್ಗ: ಶಕ್ತಿದೇವತೆ ಗೌರಿ, ವಿಘ್ನನಿವಾರಕ ವಿಘ್ನೇಶ್ವರನ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಕೋಟೆನಗರಿ ಸೇರಿ ಜಿಲ್ಲಾದ್ಯಂತ ಬಹು ಉತ್ಸಾಹದಿಂದ ಸ್ವಾಗತಿಸಿ, ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಭಾನುವಾರದಿಂದಲೇ ಸಿದ್ಧತೆಗಳು ಭರದಿಂದ ಸಾಗಿದವು. ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗಳ ಬಳಿ ಬಹುತೇಕರು ಮುಗಿಬಿದ್ದ ದೃಶ್ಯ ವಿವಿಧೆಡೆ ಕಂಡು ಬಂದಿತು.
ಜಿಲ್ಲಾದ್ಯಂತ 1,626 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗುತ್ತಿದ್ದು, ಚಿಕ್ಕ ಮತ್ತು ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ಹಲವೆಡೆ ಜೋರಾಗಿತ್ತು.
ಈ ಹಬ್ಬದಲ್ಲಿ ಬಹುಮುಖ್ಯವಾಗಿ ಗಣಪನಿಗೆ ಅತ್ಯಂತ ಪ್ರಿಯವಾದ ಗರಿಕೆ ಪತ್ರೆ, ತುಂಬೆ ಹೂ, ಎಕ್ಕೆ ಹೂವಿನ ಹಾರ, ವಿವಿಧ ಪುಷ್ಪ, ವಿವಿಧ ಹಣ್ಣುಗಳು, ಬಾಳೆ ಎಲೆ, ಮಾವಿನ ಎಲೆ, ಬಾಳೆ ದಿಂಡು ಸೇರಿ ಪೂಜೆಗೆ ಬಳಸುವ ಅಗತ್ಯ ಸಾಮಗ್ರಿಗಳ ಖರೀದಿ ಭರಾಟೆಯೂ ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪದಲ್ಲಿ ಜೋರಾಗಿ ನಡೆಯಿತು.
ವಸ್ತ್ರೋದ್ಯಮಕ್ಕೂ ಬೇಡಿಕೆ: ಗಣೇಶನ ಮೂರ್ತಿಗಳಿಗೆ ಉಡಿಸುವ ಶಲ್ಯ ಹಾಗೂ ಗೌರಿ ಹಬ್ಬದ ಅಂಗವಾಗಿ ನಾರಿಯರ ಸೀರೆಗಳಿಗೆ ಬೇಡಿಕೆ ಹೆಚ್ಚಿತ್ತು. ಗ್ರಾಮೀಣ ಭಾಗದಿಂದ ಅನೇಕರು ನಗರಕ್ಕೆ ಬಂದಿದ್ದರು. ಗ್ರಾಹಕರು ಸದಭಿರುಚಿಗೆ ತಕ್ಕಂತೆ ತಮಗಿಷ್ಟವಾದುದ್ದನ್ನು ಖರೀದಿಸಲು ಮುಂದಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ ಇದ್ದ ಕಾರಣ ವಸ್ತ್ರೋದ್ಯಮಕ್ಕೂ ಬೇಡಿಕೆ ಕಂಡುಬಂದಿತು.
ಹಬ್ಬಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾರಣಕ್ಕೆ ಕೆಲ ಸಮಯ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಜನದಟ್ಟಣೆ ಮುಂದುವರಿಯಿತು.
ಗಗನಕ್ಕೇರಿದ ಹಾರಗಳ ದರ: ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗೆ ಹಾಕುವಂತ ಹಾರ 250 ರೂ.ನಿಂದ 1ಸಾವಿರ ರೂ., ಮಂಟಪಗಳಲ್ಲಿನ ವಿನಾಯಕನ ಮೂರ್ತಿಗಳಿಗೆ 1 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಅದರಂತೆಯೇ ಬಹುತೇಕ ಮಾರಾಟವಾದವು.
ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು. ಖರೀದಿಗಾಗಿ ಬೆಳಗ್ಗೆ 11ರಿಂದ ಸಂಜೆ 4ರವರೆಗೂ ಒಳಗೆ ಪ್ರವೇಶಿಸಲು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು.
ತಲಾ ಒಂದು ತೆಂಗಿನಕಾಯಿ 20 ರೂ.ಗಳಿಂದ 30 ರೂ., ಗರಿಕೆ ಪತ್ರೆ ಜೋಡಿ 20 ರೂ., ಮಾವಿನ ಎಲೆ ಜೋಡಿ 50 ರೂ.ವರೆಗೂ ಮಾರಾಟವಾದವು. ಸೇಬು, ಬಾಳೆ ಹಣ್ಣು, ಬಿಕ್ಕೆ ಹಣ್ಣು, ಮೋಸುಂಬಿ, ದ್ರಾಕ್ಷಿ ಕ್ರಮವಾಗಿ 100ರಿಂದ 160 ರೂ., 100ರಿಂದ 120 ರೂ., 60 ರೂ., 60 ರೂ., 200 ರೂ.ನಂತೆ ಮಾರಾಟವಾದವು.
ಮಾರುಕಟ್ಟೆಯಲ್ಲಿ ಪಿಒಪಿ ಗಣೇಶ ಮಾರಾಟ: ಪರಿಸರ ಹಾನಿ ತಡೆ ಸಂಬಂಧ ಜಿಲ್ಲಾದ್ಯಂತ ಪಿಒಪಿ ಗಣೇಶ ಮೂರ್ತಿ ಮಾರಾಟ ಸಂಪೂರ್ಣ ನಿಷೇಧಿಸಿದ್ದರೂ ವ್ಯಾಪಾರಸ್ಥರು ಆನೆಬಾಗಿಲು ಮಾರ್ಗ ಸಮೀಪ ರಾಜಾರೋಷವಾಗಿ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು. ಅಲಂಕಾರಿಕ ವಸ್ತುಗಳು ವಿಶೇಷವಾಗಿ ಮಹಿಳೆಯರ ಗಮನ ಸೆಳೆದಿದ್ದರಿಂದ ಖರೀದಿಯಲ್ಲಿ ನಿರತರಾದರು.
ಸೇವಂತಿ ದರ ದಿಢೀರ್ ಕುಸಿತ: ಹೂವಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿಳಿ, ಕೆಂಪು, ನೇರಳೆ ಸೇರಿ ವಿವಿಧ ವರ್ಣದ ಸೇವಂತಿ 15ರಿಂದ 20 ಮಾರು ಪುಷ್ಪಕ್ಕೆ ತಲಾ 1,000 ರೂ. ಇದೇ ದರಕ್ಕೆ ಕನಕಾಂಬರ ಮತ್ತು ಕಾಕಡ 15 ಮಾರು, ವಿವಿಧ ವರ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ 360 ರೂ.ಗೆ ಮಾರಾಟವಾದವು. ಆದರೆ, ನಿರೀಕ್ಷೆಗಿಂತ ಹೆಚ್ಚಾಗಿ ಹೂ ಬಂದಿದ್ದರಿಂದ ಶನಿವಾರಕ್ಕಿಂತ ಭಾನುವಾರ ಹೂವಿನ ದರ ತುಸು ಇಳಿಕೆಯಾಗಿತ್ತು. ಹೀಗಾಗಿ ಹೂ ಬೆಳೆಗಾರರ ಮೊಗದಲ್ಲಿ ಸಂತಸ, ಬೇಸರ ಎರಡು ಕಂಡುಬಂದಿತು.