ಚಿಕ್ಕಮಗಳೂರಿನಲ್ಲಿ ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಗಳ ಖರೀದಿಗೆ ಆಗಮಿಸಿರುವ ಗ್ರಾಹಕರು. 
ಜಿಲ್ಲೆ

ಗೌರಿ, ಗಣೇಶ ಹಬ್ಬಕ್ಕೆ ಭರದ ಸಿದ್ಧತೆ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸ್ವರ್ಣಗೌರಿವ್ರತ ಮತ್ತು ಗಣೇಶಚತುರ್ಥಿಯನ್ನು ಆಚರಿಸಲು ಜಿಲ್ಲೆಯ ಜನರು ಸಕಲ ಸಿದ್ಧತೆಮಾಡಿಕೊಂಡಿದ್ದಾರೆ. ಗೌರಿ ಮತ್ತು ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲು ಭರ್ಜರಿ ತಯಾರಿ ನಡೆದಿದ್ದು, ಗೌರಿ ಮತ್ತು ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ನಗರ, ಪಟ್ಟಣ ವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಕ್ಕೆ ಆಗಮಿಸಿದ್ದರು.

ಮಗಳಿಗೆ ಬಾಗಿನ ಕೊಡಲು ಮೊರ, ಹೂವು,ಹಣ್ಣು, ತೆಂಗಿನಕಾಯಿ, ಬಾಗಿನದ ವಸ್ತುಗಳು ಗೌರಿದಾರಗಳನ್ನು ಖರೀದಿಸಿದರೆ, ಬಾಳೆಕಂದು, ಮಾವಿನಸೊಪ್ಪು, ತರಕಾರಿಗಳನ್ನು ಖರೀದಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಕೆಲವರು ಬಟ್ಟೆ ಅಂಗಡಿಗೆ ಹೋಗಿ ಸೀರೆ, ಕುಪ್ಪಸ ಖರೀದಿಸಿದರು.

ಆಜಾದ್‌ಪಾರ್ಕ್ ವೃತ್ತ ಸಮೀಪದ ಮಾರುಕಟ್ಟೆ, ಹನುಮಂತಪ್ಪ ವೃತ್ತ, ತೊಗರಿಹಂಕಲ್ ವೃತ್ತದಲ್ಲಿ ಹೂವುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ತಳ್ಳುಗಾಡಿಗಳಲ್ಲಿ ಹಣ್ಣುಗಳ ಮಾರಾಟ ಜೋರಾಗಿತ್ತು. ಹೂವುಗಳ ದರ ತುಸು ಜಾಸ್ತಿಯಾಗಿದ್ದರೆ, ಹಣ್ಣುಗಳ ಬೆಲೆ ಸಾಮಾನ್ಯವಾಗಿತ್ತು.

ಸೇವಂತಿಗೆ ಮಾರಿಗೆ ೧೨೦ರಿಂದ ೧೩೦-೧೫೦ ರೂ. ದರ ನಿಗದಿಯಾಗಿದ್ದರೆ, ಸೂಜಿ ಮಲ್ಲಿಗೆ ಮತ್ತು ದುಂಡು ಮಲ್ಲಿಗೆ ೨೦೦ ರೂ.,ಕಾಕಟ ೧೦೦-೧೫೦, ಕಣಗಲು ೧೦೦ ರೂ., ಚೆಂಡುಹೂವು ೫೦ರಿಂದ ಹಿಡಿದು ೧೦೦ ರೂ. ದರದಲ್ಲಿ ಮಾರಾಟವಾಗುತ್ತಿದ್ದವು. ಕನಕಾಂಬರ ಮಾರಿಗೆ ೧೫೦ ರೂ. ಇತ್ತು. ಬಾಳೆಕಂದು ಜೋಡಿಗೆ ೫೦ರೂ., ಮಾವಿನ ಸೊಪ್ಪು ಕಟ್ಟಿಗೆ ೨೦ ರೂ., ತೆಂಗಿನಕಾಯಿ ೫೦ರಿಂದ ಹಿಡಿದು ೬೦,೭೦,೮೦ ರೂ. ದರ ನಿಗದಿಯಾಗಿದ್ದವು. ಪುಟ್ಟಬಾಳೆ ಕೆ.ಜಿ.ಗೆ ೧೨೦ ರೂ., ಪಚ್ಚಬಾಳೆ ೪೦ ರೂ. ಇತ್ತು. ಬಾಗಿನ ವಸ್ತು ಪ್ಯಾಕೇಟ್‌ವೊಂದಕ್ಕೆ ೪೦ ರೂ.ನಂತೆ ಮಾರಾಟವಾಗುತ್ತಿದ್ದವು. ಬಳೆಗಳ ಮಾರಾಟ ನಗರದಲ್ಲಿ ಜೋರಾಗಿ ನಡೆಯಿತು.

ಸೇಬು ಕೆ.ಜಿ.ಗೆ ೧೪೦ ರೂ., ಮರದ ಸೇಬು ೧೪೦, ಕಪ್ಪು ಮತ್ತು ಬಿಳಿದ್ರಾಕ್ಷಿ ೨೦೦, ಕಿತ್ತಳೆ ೧೪೦, ಮೊಸುಂಬೆ ೧೪೦, ದಾಳಿಂಬೆ ೧೬೦ ರೂ., ಸೀಬೆ ೧೦೦, ಅನಾನಸ್ ೧೦೦,. ಸಪೋಟ ಮತ್ತು ಸೀತಾಫಲ ೧೦೦ ರೂ.ನಂತೆ ಮಾರಾಟವಾದವು. ಒಟ್ಟಾರೆಯಾಗಿ ಗೌರಿ ಮತ್ತು ಗಣೇಶ್ ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಎಲ್ಲ ರೀತಿಯ ತಯಾರಿಗಳು ನಡೆದಿವೆ.

ಮಾರುಕಟ್ಟೆ ಪ್ರವೇಶಿಸಿದ ಮೂರ್ತಿಗಳು

ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರವೇ ಗಣಪತಿ ಹಾಗೂ ಗೌರಿ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿವೆ. ಮಂಗಳವಾರ ಗೌರಿ ಪ್ರತಿಷ್ಠಾಪನೆ ನಡೆಯಲಿದ್ದು, ಸೋಮವಾರವೇ ನಗರದ ಅಲ್ಲಲ್ಲಿ ಮೂರ್ತಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರು ವರ್ತಕರ ಬಳಿಕ ಸಾರ್ವಜನಿಕರು ತೆರಳಿ ಮೂರ್ತಿಗಳ ಬಗ್ಗೆ ವಿಚಾರಿಸುತ್ತಿದ್ದ ಹಾಗೂ ಮಂಗಳವಾರ ಬೆಳಗ್ಗೆಯೇ ಗೌರಿ ಮೂರ್ತಿಗಳನ್ನು ಕೊಂಡೊಯ್ಯಲು ಬರುವುದಾಗಿ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು. ಇನ್ನು ಕೆಲವರು ಹಬ್ಬಕ್ಕೆ ಮುನ್ನಾ ದಿನವೇ ಮೂರ್ತಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.

ಇನ್ನು ದೊಡ್ಡ ದೊಡ್ಡ ಗಣಪತಿ ಸೇವಾ ಸಮಿತಿಯವರು ಈಗಾಗಲೇ ಗಣಪತಿ ಮೂರ್ತಿಗಳನ್ನು ತಯಾರು ಮಾಡಲು ಆರ್ಡರ್ ನೀಡಿದ್ದು, ಗಣಪತಿ ಮೂರ್ತಿಗಳಿಗೆ ಕಲಾವಿದರು ಈಗಾಗಲೇ ಅಂತಿಮ ಸ್ಪರ್ಷ ನೀಡುತ್ತಿದ್ದಾರೆ. ಇನ್ನು ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಸಣ್ಣ ಸಣ್ಣ ಗಣಪತಿಗಳನ್ನು ನೋಡಲು ಮಾರುಕಟ್ಟೆಯತ್ತ ಯುವಜನತೆ ಧಾವಿಸಿದ್ದರು.

ತಮಗೆ ಬೇಕಾದ ಗಣಪತಿ ಮೂರ್ತಿಗಳನ್ನು ಆಯ್ಕೆ ಮಾಡಿ ಮುಂಗಡ ಹಣ ನೀಡಿದ್ದಲ್ಲದೆ ಬುಧವಾರ ಬೆಳಗ್ಗೆಯೇ ಬಂದು ಮೂರ್ತಿಗಳನ್ನು ಕೊಂಡೊಯ್ಯಲು ಸಿದ್ಧತೆ ಮಾಡಿಕೊಂಡಿದ್ದಾರೆ.