ಚನ್ನರಾಯಪಟ್ಟಣ ತಾಲೂಕು ದಿಡಗ ಗ್ರಾಮದ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀಗೌರಿ-ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಗುರುವಾರ ವೈಭವದಿಂದ ನಡೆಯಿತು. ಕೆ.ಪಿ.ರಾಮಕೃಷ್ಣ, ಎಸ್.ಕುಮಾರ್, ಪ್ರಕಾಶ್, ಎಚ್.ಆರ್.ಮಹೇಶ್, ಅನಂತ್, ರಾಮಚಂದ್ರಯ್ಯ ಇದ್ದರು. 
ಜಿಲ್ಲೆ

ಗೌರಿ-ಗಣೇಶ ವಿಸರ್ಜನಾ ಮಹೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ದಿಡಗ ಗ್ರಾಮದಲ್ಲಿ ಶ್ರೀವಿನಾಯಕ ಸೇವಾ ಸಮಿತಿಯಿಂದ ಗೌರಿ ಹಾಗೂ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಶ್ರೀವಿನಾಯಕ ಮಂದಿರದಲ್ಲಿ ಗಣೇಶ ಚತುರ್ಥಿಯಂದು ಶ್ರೀಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ದಿನನಿತ್ಯ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿನಿಯೋಗ ನಡೆಸಲಾಗಿತ್ತು.

ಗುರುವಾರ ಬೆಳಗ್ಗೆ ತೆರೆದ ವಾಹನದ ಮೇಲೆ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಇರಿಸಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಒಯ್ಯಲಾಯಿತು. ಮೆರವಣಿಗೆಯು ಡಾ.ರಾಜ್ ವೃತ್ತದ ಮೂಲಕ ದಿಡಗ ಹಳೆ ಗ್ರಾಮದ ಕೆರೆಯ ಬಳಿಗೆ ಆಗಮಿಸಿತು. ದಡದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೀರಿನಲ್ಲಿ ವಿಸರ್ಜಿಸಲಾಯಿತು. ಬಳಿಕ ಪ್ರಸಾದ ವಿನಿಯೋಗ ನೆರವೇರಿತು.

ಪ್ರಧಾನ ಅರ್ಚಕ ಶ್ರೀರಾಮಚಂದ್ರಯ್ಯ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಶ್ರೀವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ.ರಾಮಕೃಷ್ಣ, ಖಜಾಂಚಿ ಎಸ್.ಕುಮಾರ್, ಕಾರ್ಯದರ್ಶಿ ಪ್ರಕಾಶ್, ಉಪಕಾರ್ಯದರ್ಶಿ ಎಚ್.ಆರ್.ಮಹೇಶ್, ಸದಸ್ಯರಾದ ಕೆ.ಪಿ.ಪುಟ್ಟರಾಜು, ಅನಂತ್ ಭಾಗವಹಿಸಿದ್ದರು.