ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ತೆರೆದ ವಾಹನ ಮೇಲೆ 108 ಕಳಸಗಳಿಂದ ನಿರ್ಮಿಸಿದ್ದ ಕಲ್ಪವೃಕ್ಷ ಪುಷ್ಪ ಮಂಟಪದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ಪ್ರಾರಂಭಗೊಂಡ ಮಹೋತ್ಸವ ವಿವಿಧ ಕಲಾ ತಂಡಗಳೊಂದಿಗೆ ಆರಂಭಗೊಂಡ ಉತ್ಸವ, ಕೋಟೆ ಬೀದಿ, ನವೋದಯ ವೃತ್ತ, ಮೈಸೂರು ರಸ್ತೆ, ಆಸ್ಪತ್ರೆ ರಸ್ತೆ, ಬಿ.ಎಂ.ರಸ್ತೆ, ಕುವೆಂಪುನಗರ, ಗಾಂಧಿವೃತ್ತ, ಮಾರುಕಟ್ಟೆ ರಸ್ತೆ, ರೇಣುಕಾಂಬ ರಸ್ತೆ, ಬಾಗೂರು ರಸ್ತೆ ಮೂಲಕ ಅಮಾನಿಕೆರೆ ಅಂಗಳಕ್ಕೆ ಸಾಗಿತು.
ಮಹಾ ಮಂಗಳಾರತಿ ನಂತರ ಕೆರೆಯಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಆನೆಯ ಮೇಲೆ ಕೂರಿಸಲಾಗಿದ್ದ ಚಾಮುಂಡೇಶ್ವರಿಯ ಅಂಬಾರಿ, ಕೇರಳದ ಚಂಡೆವಾದ್ಯ, ಡೊಳ್ಳುಕುಣಿತ, ನಾದಸ್ವರ, ನಗಾರಿ, ಪೂಜಾಕುಣಿತ, ಸೋಮನ ಕುಣಿತ, ವೀರಭದ್ರ ಕುಣಿತ, ನಂದಿಧ್ವಜ, ತಮಟೆ, ಮಂಗಳೂರಿನ ಹುಲಿವೇಷ ಹಾಗೂ ಮುವತ್ತು ಮಾರ್ಕಿನ ಬೀಡಿಯ ಗೊಂಬೆ ಕುಣಿತ ಸೇರಿ ಹತ್ತಾರು ಕಲಾತಂಡಗಳು ಮೇಳೈಸಿದವು.
ಶಾಸಕ ಸಿ.ಎನ್.ಬಾಲಕೃಷ್ಣ, ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಅಶೋಕ್, ಗೌರವಾಧ್ಯಕ್ಷ ಸಿ.ಕೆ.ಕೃಷ್ಣ, ಉಪಾಧ್ಯಕ್ಷ ನಂಜುಂಡ ಮೈಮ್, ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಸಿ.ಎಸ್.ಮನೋಹರ್ ಹಾಗೂ ಪದಾಧಿಕಾರಿಗಳಾದ ರಾಜಶೇಖರ್, ಕುಮಾರ್‌ಸ್ವಾಮಿ, ಗಂಗಾಧರ್, ರಾಜು, ಮನೋಹರ್, ಕಲಾವಿದ ರವೀಂದ್ರ ಹಾಗೂ ಇತರರು ಇದ್ದರು.