ಜಿಲ್ಲೆ

ಗೌರವಧನ ಹೆಚ್ಚಿಸಿ, ಸುರಕ್ಷತಾ ಪರಿಕರ ನೀಡಿ

ಚಿಕ್ಕಬಳ್ಳಾಪುರ : ಗೌರವಧನ ಹೆಚ್ಚಳ ಮತ್ತು ಕರೊನಾ ತಡೆ ಕಾರ್ಯಕ್ಕೆ ಸುರಕ್ಷತಾ ಪರಿಕರಣಗಳ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿತರ ಪತ್ತೆ, ಆರೋಗ್ಯ ಮಾಹಿತಿ ಸಂಗ್ರಹ ಸರ್ವೇ, ಜಾಗೃತಿ ಸೇರಿ ಮಹತ್ತರವಾದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆದರೂ ಯಾವುದೇ ಸುರಕ್ಷತೆ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಗೌರವಧನ ನೀಡುತ್ತಿಲ್ಲ. ಹಲವು ಬಾರಿ ಹೋರಾಟ ನಡೆಸಿ, ಸರ್ಕಾರದ ಗಮನ ಸೆಳೆದರೂ ಕಿವಿಗೊಟ್ಟಿಲ್ಲ ಎಂದು ಸಂಘಟನೆ ಜಿಲ್ಲಾ ಉಸ್ತುವಾರಿ ಜಿ.ಹನುಮೇಶ್ ಆರೋಪಿಸಿದರು.

ಕೇಂದ್ರ ಸರ್ಕಾರದ 4 ರಿಂದ 5 ಸಾವಿರ ಗೌರವಧನ ಪಡೆಯಲು ನಿರ್ವಹಿಸಿದ 34 ಚಟುವಟಿಕೆಯನ್ನು ಆನ್ ಲೈನ್‌ನಲ್ಲಿ ಅಪಡೇಟ್ ಮಾಡಬೇಕು. ಪ್ರಸ್ತುತ ಕರೊನಾ ನಿಯಂತ್ರಣದಲ್ಲಿ ತೊಡಗಿಸಿಕೊಂಡಿರುವುದರಿಂದ ಇತರ ಚಟುವಟಿಕೆ ನಿರ್ವಹಣೆಯಿಲ್ಲದೇ ಗೌರವಧನದಿಂದ ವಂಚಿತರಾಗಬೇಕಾಗಿದೆ ಎಂದು ತಿಳಿಸಿದರು.

ಗೌರವಧನ ಹೆಚ್ಚಿಸಿ, ವಿಶೇಷ ಭತ್ಯೆ ನೀಡಬೇಕು. ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು. ಇಲ್ಲದಿದ್ದಲ್ಲಿ ಸೇವೆ ಸ್ಥಗಿತಗೊಳಿಸಿ, ಹೋರಾಟ ಮುಂದುವರೆಸುವುದಾಗಿ ಎಚ್ಚಿಸಿದ ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಂಘಟನಾ ಕಾರ್ಯದರ್ಶಿ ಕೃಷ್ಣ, ಕಾರ್ಯಕರ್ತೆಯರಾದ ಸರಸ್ವತಮ್ಮ, ಲಕ್ಷ್ಮೀ, ಲಲಿತಾ, ಪಂಕಜಾ, ಸುಶೀಲಮ್ಮ ಶಾಂತಮ್ಮ, ಸುಜಾತಾ ಇತರರಿದ್ದರು.