ಕಲಘಟಗಿ: ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದಿಂದ ಕಲಘಟಗಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪ್ರಭಾರಿ ಗ್ರೇಡ್-2 ತಹಸೀಲ್ದಾರ್ ಬಿ.ಕೆ. ತಾಂಬ್ರೆ, ಶಿರಸ್ತೇದಾರ್ ಸುರೇಶ ಅಡವಿ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಎಐಯುಟಿಯುಸಿ ಕೇಂದ್ರ ಕಾರ್ವಿುಕ ಸಂಘಟನೆಗೆ ಸೇರಿದ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಿರ್ದೇಶನದನ್ವಯ ಜು. 10ರಿಂದ ರಾಜ್ಯಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಕರೊನಾ ನಿಯಂತ್ರಣಕ್ಕಾಗಿ ಸೇನಾನಿಗಳಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮರ್ಪಕ ವೇತನವಿಲ್ಲದೆ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಅವರಿಗೆ ಮಾಸಿಕ 12 ಸಾವಿರ ರೂ. ಗೌರವಧನ, ಆರೋಗ್ಯ ರಕ್ಷಣೆ ಸಾಮಗ್ರಿ, ಸೋಂಕಿತ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರೊಬೆಷನರಿ ಪಿಎಸ್ಐ ರಾಜು ಮಮದಾಪೂರ, ಎನ್.ಎಂ. ಹೊನ್ನಪ್ಪನವರ, ಮಹಿಳಾ ಪಿ.ಸಿ. ರೇಶ್ಮಾ ಗುಂಜಾಳ ಹಾಗೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಆಶಾ ಕಾರ್ಯಕರ್ತೆಯರಾದ ಶೋಭಾ ಹಿರೇಮಠ, ಸುಶೀಲಾ ಮುಗಳಿ, ಶೋಭಾ ಯಾದವ, ಯಲ್ಲಮ್ಮ ಭೋಸಲೆ, ಶಾರದಾ ತಾವರಗೇರಿ, ಸುವರ್ಣಾ ಶಿವಳ್ಳಿ, ಪಾರವ್ವ ಉಗ್ಗಿನಕೇರಿ, ದೀಪಾ ಹುಂಡ್ರೆ, ಲಕ್ಷ್ಮೀ ಕಡ್ಲಾಸ್ಕರ, ಗಂಗಾ ರಾಠೋಡ, ಶಶಿಕಲಾ ಪೂಜಾರ, ಶಕುಂತಲಾ ಪ್ಯಾಟೆಪ್ಪನವರ, ಜೈರಾಬಿ ಬಮ್ಮಿಗಟ್ಟಿ, ಶ್ರೀದೇವಿ ಪಾಟೀಲ, ಕಾವ್ಯಾ ಕೋಟಿ, ಇತರರಿದ್ದರು.