ಜಿಲ್ಲೆ

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಪ್ರತಿಭಟನೆ

ದಾವಣಗೆರೆ: ಗೌರವಧನ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಡಿ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು ಎಡಿಸಿ ಪಿ.ಎನ್. ಲೋಕೇಶ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಆರ್‌ಸಿಎಚ್ ಪೋರ್ಟಲ್ ಮೂಲಕ ಪ್ರೋತ್ಸಾಹಧನ ನೀಡುವುದನ್ನು ರದ್ದುಪಡಿಸಬೇಕು. ನಿರಂತರ ಚಟುವಟಿಕೆ ಹಾಗೂ ನಿಗದಿತ ಕೆಲಸಕ್ಕೆ ಕೇಂದ್ರ ಸರ್ಕಾರ ನೀಡುವ ಹಣವನ್ನೆಲ್ಲ ಒಟ್ಟುಗೂಡಿಸಿ ಮಾಸಿಕ ಗೌರವಧನವಾಗಿ 12 ಸಾವಿರ ರೂ. ನೀಡಬೇಕು. ಆರ್‌ಸಿಎಚ್ ಪೋರ್ಟಲ್ನ ಸಮಸ್ಯೆಗಳಿಂದಾಗಿ 2 ವರ್ಷಗಳಿಂದ ಆಗಿರುವ ಆರ್ಥಿಕ ನಷ್ಟವನ್ನು ಹಿಂಬಾಕಿ ರೂಪದಲ್ಲಿ ನಷ್ಟ ಪರಿಹಾರ ನೀಡಬೇಕು. ಕೋವಿಡ್ ವೇಳೆ ಕಾರ್ಯ ನಿರ್ವಹಿಸಿದವರಿಗೆ ಇನ್‌ಸೆಂಟಿವ್ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ವೇತನವಿಲ್ಲ. ಗೌರವಧನವನ್ನು ಹೆಚ್ಚಿಸಬೇಕು. ಸ್ವಯಂ ನಿವೃತ್ತಿ ಪಡೆಯುವವರಿಗೆ ಈಗಿರುವ 20 ಸಾವಿರ ರೂ. ಇಡಿಗಂಟನ್ನು, ಪಶ್ಚಿಮ ಬಂಗಾಳದಲ್ಲಿ ಇರುವಂತೆ 3 ಲಕ್ಷ ರೂ.ಗೆ ಹೆಚ್ಚಿಸಬೇಕು. ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ, ತೀವ್ರ ಆರೋಗ್ಯ ತೊಂದರೆಗೊಳಗಾದ ಆಶಾಗಳಿಗೆ ಅನಾರೋಗ್ಯಕ್ಕೆ ಅನುಗುಣವಾಗಿ ಚೇತರಿಕೆಗೆ ಪರಿಹಾರ ಒದಗಿಸಬೇಕು. ಸೇವಾನಿರತರಿದ್ದ ವೇಳೆ ಸಾವನ್ನಪ್ಪಿದರೆ, ಅವರ ಕುಟುಂಬ ಸದಸ್ಯರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಎಐಯುಟಿಯಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಜಿಲ್ಲಾ ಕಾರ್ಯದರ್ಶಿ ನಾಗವೇಣಿ, ಸುಮಾ ನಲ್ಲೂರು, ಲೀಲಾವತಿ, ಭಾರತಿ, ರೀತಾ, ತಿಪ್ಪಮ್ಮ ನೀರ್ಥಡಿ, ಲಲಿತಮ್ಮ ಹೆಬ್ಬಾಳು, ಅನಿತಾ ಶಿವಪುರ ಇತರರಿದ್ದರು.