ಜಿಲ್ಲೆ

ಗೌರವಧನ ಹೆಚ್ಚಳಕ್ಕೆ ಆಗ್ರಹ

ಚಿತ್ರದುರ್ಗ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರಸಕ್ತ ಸಾಲಿನಿಂದಲೇ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಎಐಟಿಯುಸಿ ಜಿಲ್ಲಾ ಸಮಿತಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 6ನೇ ಗ್ಯಾರಂಟಿಯಾದ ಗೌರವಧನ ಹೆಚ್ಚಿಸಲು ಕ್ರಮವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನಪರವಾಗಿದ್ದರೂ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ದುಡಿಯುತ್ತಿರುವ ಮಹಿಳಾ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ಹಿಂದಿನ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಈಡೇರಿಲ್ಲ ಎಂದು ಬೇಸರಿಸಿದರು.

ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಇಡಿಗಂಟು 3 ಲಕ್ಷ ರೂ. ನೀಡಬೇಕು. ಕೇಂದ್ರ ಮೀಸಲಿಟ್ಟಿದ್ದ 28 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ. ಕಡಿತಗೊಳಿಸಿದೆ. ಹೀಗಾಗಿ ಅದರ ಗಾತ್ರ 48 ಸಾವಿರ ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ 3,500 ರೂ., ರಾಜ್ಯ ಸರ್ಕಾರ 8,500 ರೂ. ನೀಡುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಯಾವ ಭದ್ರತೆ ಇಲ್ಲದೆ, ದುಡಿಯುವ ಈ ವರ್ಗಕ್ಕೆ ನ್ಯಾಯ ನೀಡಲು ಗೌರವಧನ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಕೋರಿದರು.

ಸಮಿತಿ ಅಧ್ಯಕ್ಷೆ ಎಸ್.ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ಜಮುನಾಬಾಯಿ, ಖಜಾಂಚಿ ವಿನೋದಮ್ಮ, ಪದಾಧಿಕಾರಿಗಳಾದ ಎಂ.ಸಾವಿತ್ರಮ್ಮ, ರಾಧಮ್ಮ, ರತ್ನಮ್ಮ, ಸತ್ಯಕೀರ್ತಿ ಇತರರಿದ್ದರು.