ಯಳಂದೂರು: ತಾಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೌಡಹಳ್ಳಿ ಡ್ಯಾಂ ಏರಿ ಬದಿಯಲ್ಲಿ ಹಲವು ಕಡೆ ನೀರು ಸೋರಿಕೆಯಾಗಿ, ಹರಿಯುತ್ತಿರುವ ಪರಿಣಾಮ ಕೆರೆ ಏರಿಗೆ ಅಪಾಯದ ಆತಂಕ ಎದುರಾಗಿದೆ. ಬಿಆರ್‌ಟಿ ಅರಣ್ಯ ಪ್ರದೇಶದ ಬೆಟ್ಟ ಗುಡ್ಡಗಳ ಪ್ರದೇಶದಿಂದ ಹಳ್ಳ ಕೊಳ್ಳಗಳ ಮೂಲಕ ಇಲ್ಲಿಗೆ ನೀರು ಹರಿದು ಬರುತ್ತದೆ.
ಈರಣ್ಣಯ್ಯನಕಟ್ಟೆ ಪೋಡಿನ ಬಳಿ ಇರುವ ಗೌಡಹಳ್ಳಿ ಡ್ಯಾಮ್‌ನಲ್ಲಿ ಹಲವು ವರ್ಷಗಳ ಬಳಿಕ ಸುಮಾರು 15 ಅಡಿಗಿಂತಲೂ ಹೆಚ್ಚು ನೀರು ಶೇಖರಣೆಯಾಗಿದೆ. ಈ ಡ್ಯಾಮ್ ಹಲವು ರೈತರ ಕೃಷಿ ಜಮೀನುಗಳಿಗೆ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಇಲ್ಲಿ ನೀರು ತುಂಬಿದೆ.
ಆದರೆ ಕಳೆದ ಒಂದು ವಾರದಿಂದ ಕೆರೆ ಏರಿ ಬದಿಯ ಮೂರು ಕಡೆ ನೀರು ಹರಿದು ಹೋಗುತ್ತಿದೆ. ಜತೆಗೆ ಏರಿಯ ಬದಿಯಲ್ಲಿ ದೊಡ್ಡ ಕಂದಕವನ್ನು ಖಾಸಗಿ ವ್ಯಕ್ತಿ ಮಾಡಿರುವ ಪರಿಣಾಮ ಇಲ್ಲಿನ ಏರಿ ಒಡೆಯುವ ಆತಂಕ ಎದುರಾಗಿದ್ದು ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಗೌಡಹಳ್ಳಿ ಗ್ರಾಮದ ಪೂರ್ವಭಾಗದಲ್ಲಿ ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಬೀಳುವ ಮಳೆಯನ್ನು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಜಲಾಶಯ ನಿರ್ಮಾಣವಾಗಿ ಹಲವು ವರ್ಷಗಳ ಕಳೆದಿದೆ. ಇದು ವನ್ಯಜೀವಿಗಳ ದಾಹ ತಣಿಸುವ ಜತೆಗೆ ಹೆಚ್ಚಿನ ನೀರು ಸಂಗ್ರಹವಾದರೆ ಅಕ್ಕಪಕ್ಕದ ಜಮೀನುಗಳಿಗೂ ನೀರುಣಿಸುತ್ತದೆ. ಇದರ ಬಳಿಯಲ್ಲೇ ರಸ್ತೆ ಹಾದು ಹೋಗಿದ್ದು, ಇದಕ್ಕೆ ಹೊಂದಿಕೊಂಡತೆ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನಿನಲ್ಲಿ 7 ಅಡಿ ಆಳ 6 ಅಡಿಗಿಂತಲೂ ಅಗಲವಾದ ಕಂದಕವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕಾಗಿ ಕಂದಕ ನಿರ್ಮಾಣ ಮಾಡಲಾಗುತ್ತಿದೆ ಎನ್ನುವುದು ಇವರು ನೀಡುವ ಸಬೂಬು.
ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟ: ಬಿಆರ್‌ಟಿ ಬಳಿಯ ಕೆರೆಯ ಏರಿ ಬಳಿಯಲ್ಲಿ 15 ಅಡಿ ದೊಡ್ಡ ಕಂದಕವನ್ನು ನಿರ್ಮಾಣ ಮಾಡಿ ಹಲವು ವರ್ಷಗಳ ಕಳೆದರೂ ಈ ಬಗ್ಗೆ ಸಂಬಂಧಪಟ್ಟ ಕಂದಾಯ ಇಲಾಖೆ, ನೀರಾವರಿ ಹಾಗೂ ಬಿಆರ್‌ಟಿ ವನ್ಯಜೀವಿ ಹುಲಿ ಸಂರಕ್ಷಣೆಯ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ನಚ್ಚರಿಕೆಯ ಕ್ರಮವನ್ನು ಕೈಗೊಂಡಿಲ್ಲ. ಹಾಗಾಗಿ, ಇಲ್ಲಿನ ಡ್ಯಾಂಗೆ ಇದು ಮುಂದೊಂದು ಮಾರಕವಾಗಿ ಪರಿಣಮಿಸುವ ಸಂಭವವಿದೆ. ಆದ್ದರಿಂದ ತಕ್ಷಣ ಕೆರೆಯ ಏರಿಯ ದುರಸ್ತಿಪಡಿಸಿ ಜತೆಗೆ ಬದಿಯ ಕಂದಕವನ್ನು ಮುಚ್ಚಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.