ಶನಿವಾರಸಂತೆ: ಗೌಡಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಂಗಳೂರು ಉದ್ಯಮಿ ಎಂ.ಎಲ್.ಕೋಟೆಯೂರು ಸಂತೋಷ್ ಕುಟುಂಬ ಸಮೇತ ಆಗಮಿಸಿ ಈ ಶಾಲೆಯಲ್ಲಿ ಓದಿದ ನೆನಪಿಗಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಿ ತಮ್ಮ ಮಗುವಿನ ಹುಟ್ಟುಹಬ್ಬವನ್ನು ಆಚರಿಸಿದರು.
ಉದ್ಯಮಿ ಸಂತೋಷ್ ಮಾತನಾಡಿ, ಈ ಶಾಲೆಯ ಭದ್ರತೆಗಾಗಿ ಸಿಸಿ ಕ್ಯಾಮರಾ ನೀಡುವುದಾಗಿ ಹೇಳಿದರು. ಇಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ಉನ್ನತ ಉದ್ಯೋಗದಲ್ಲಿದ್ದಾರೆ. ಖಾಸಗಿ ಶಾಲಾ ವ್ಯಾಮೋಹಕ್ಕೆ ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ನಮ್ಮೂರ ಶಾಲೆ ಹಾಗೂ ನಾವು ಓದಿದ ಶಾಲೆಗಳನ್ನು ನಾವು ಉಳಿಸಲು ಶ್ರಮ ಪಡಬೇಕಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸುರೇಶ್, ಮೂಗಪ್ಪ ಬಸನಕೊಪ್ಪ ಮತ್ತು ಕೋಟೆಯೂರ್ ಲೋಹಿತ್, ಅಕ್ಷತ್ ಚಿಕ್ಕೋಳೂರು ಹಾಗೂ ಮುಖ್ಯ ಶಿಕ್ಷಕಿ ಚಂದ್ರಕಲಾ, ಶಿಕ್ಷಕರು ಹಾಜರಿದ್ದರು.