ಜಿಲ್ಲೆ

ಗೋಹತ್ಯೆ, ಮತಾಂತರ ಕಾಯ್ದೆ ಹಿಂಪಡೆಯದಂತೆ ಆಗ್ರಹ

ಹಾಸನ: ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯದಂತೆ ಒತ್ತಾಯಿಸಿ ಜೂ.26ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.

ಕಾಂಗ್ರೆಸ್‌ನವರು ಸೇಡಿಗೆ ಸೇಡು ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಠ್ಯ ಪರಿಷ್ಕರಣೆಗೂ ಮುಂಗಾಗಿದ್ದು, ಹೆಗಡೆವಾರ್, ಸಾವರ್ಕರ್, ಭಗತ್ ಸಿಂಗ್ ಪಠ್ಯವನ್ನು ಹಿಂಪಡೆಯಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ ಬೌದ್ಧಿಕ ದಿವಾಳಿತನ. ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರ ಪಠ್ಯವನ್ನು ತೆರವುಗೊಳಿಸಲು ಮುಂದಾಗಿರುವುದು ಕಾಂಗ್ರೆಸ್‌ನ ಮೂರ್ಖತನದ ಪರಮಾವಧಿ. ಗಾಂಧಿ, ನೆಹರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರ? ಅಕ್ಬರ್, ಹುಮಾಯೂನ್, ಟಿಪ್ಪು ಸುಲ್ತಾನ್ ಬೇಕು, ಸಾವರ್ಕರ್, ಹೆಗಡೆವಾರ್, ಭಗತ್ ಸಿಂಗ್ ಬೇಡವೇ ಎಂದು ಪ್ರಶ್ನಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಗೋವಿನ ಶಾಪ ತಟ್ಟಿದೆ. ಮತಾಂತರ ನಿಷೇಧ ಕಾಯ್ದೆ ಪೇಪರ್ ಇದೆಯೇ ವಿನಃ ಸರಿಯಾಗಿ ಅನುಷ್ಠಾನಕ್ಕೆ ತರಲಿಲ್ಲ. ಹೀಗಾಗಿ ಬಿಜೆಪಿಯವರಿಗೆ ಈ ಕಾಯ್ದೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಾಲಾಯಕ್‌ಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದರೆ ಹೋರಾಟ ತೀವ್ರಗೊಳಿಸಲಾಗುವುದು. ನಮ್ಮ ಕಾರ್ಯಕರ್ತರ ಮೇಲೆ ಸಾವಿರ ಕೇಸ್ ಹಾಕಲಿ. ಗಲ್ಲಿಗೆ ಹಾಕಿದರೂ ನಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬೇಕು ಎಂಬ ದುರಾಲೋಚನೆ ಹೊಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದು ವಿರೋಧಿಯಾಗಿಯೇ ನಡೆದುಕೊಂಡು ಬಂದಿದೆ ಎಂದು ದೂರಿದರು.

ಮತಾಂತರ ಕಾಯ್ದೆ ನಿಷೇಧ ರದ್ದುಗೊಳಿಸುವ ಮೂಲಜ ತಮ್ಮ ನಾಯಕಿ ಸೋನಿಯಾ ಗಾಂಧಿಗೆ ಉಡುಗೊರೆ ನೀಡಲು ಹೊರಟಿದ್ದಾರೆ. ಇದನ್ನು ನಾಡಿನ ಮಠಾಧೀಶರು ಖಂಡಿಸಲು ಹೋಗುತ್ತಿಲ್ಲ. ಅವರೆಲ್ಲಾ ಮಠದ ಆಸ್ತಿ ಉಳಿಸಿಕೊಳ್ಳಲು ಸೀಮಿತವಾಗಿದ್ದಾರೆ. ಇದು ಹಿಂದು ಸಮುದಾಯದ ದುರಾದೃಷ್ಟ. ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವುದು ಮುಸ್ಲಂ ತುಷ್ಟಿಕರಣಕ್ಕಾಗಿ. ಸೋನಿಯ ಗಾಂಧಿ ಓಲೈಕೆಗಾಗಿ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಮಹಾಲಿಂಗ ಗಣ, ಜಿಲ್ಲಾಧ್ಯಕ್ಷ ಜನಕೆರೆ ಹೇಮಂತ್ ಸೇರಿದಂತೆ ಇತರರು ಇದ್ದರು.