ಬೀದರ್: ಬರುವ ಡಿ. 7ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡಿಸಲಾಗುತ್ತಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳ್ಳುವ ಸಮಯ ಇದೀಗ ಸನ್ನಿಹಿತವಾಗಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಬರುವ ಅಧಿವೇಶನದಲ್ಲಿ ಕಾಯ್ದೆ ಮಂಡನೆಗೆ ಹಸಿರು ನಿಶಾನೆ ಸಿಕ್ಕಿದ್ದು, ಇದಕ್ಕೆ ಬೇಕಾದ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಂಗಳವಾರ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಂಡಿರುವ ಬೇರೆ ಬೇರೆ ರಾಜ್ಯಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಹಾಗೂ ಪರಿಣಿತರ ಜತೆಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಇನ್ನಷ್ಟ ಬಲಪಡಿಸುವ ಸಲಹೆ ಬಂದಿವೆ. ಇದರನ್ವಯ ಹೊಸ ಕಾಯ್ದೆ ಜಾರಿಗೆ ಬರಲಿದೆ. ಇದರ ಅನುಷ್ಠಾನದ ಬಳಿಕ ರಾಜ್ಯದಲ್ಲಿ ಸಹ ಗೋಹತ್ಯೆ ನಿಷೇಧವಾಗುವ ಜತೆಗೆ ರಾಜ್ಯದ ಒಳಗೆ ಮತ್ತು ಹೊರಗೆ ಗೋಮಾಂಸ ಆಮದು ಮತ್ತು ರಫ್ತು ಸಂಪೂರ್ಣ ನಿಷೇಧವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010ನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಮಂಡಲದಲ್ಲಿ ಮಂಡಿಸಿ ರಾಜ್ಯಪಾಲರ ಅನುಮೋದನೆಗೆ ಕಳಿಸಲಾಗಿತ್ತು. ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ್ ಅವರು ಇದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಿದ್ದರಿಂದ ಕಾಯ್ದೆ ಅನುಷ್ಠಾನದಲ್ಲಿ ವಿಳಂಬವಾಯಿತು. ಅಲ್ಲದೆ ಕೇಂದ್ರ ಗೃಹ ಇಲಾಖೆ ಸಹ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರವು 1964ರ ಗೋಹತ್ಯೆ ನಿಷೇಧ ಕಾಯ್ದೆಯೇ ಮುಂದುವರೆಸಿತ್ತು. ಇದೀಗ ಈ ಕಾಯ್ದೆ ಮತ್ತಷ್ಟು ಬಲಪಡಿಸಿ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಹೊಸ ಕಾಯ್ದೆ ಜಾರಿಗೆ ಬಂದರೆ ಜಾನುವಾರುಗಳ ವಧೆ ನಿಷೇಧ, ಗೋಮಾಂಸ ಮಾರಾಟ ಹಾಗೂ ಬಳಕೆ ನಿಷೇಧ, ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರಗಳ ಅಕ್ರಮ ಸಾಗಣೆ, ವಧೆಗಾಗಿ ಜಾನುವಾರಗಳ ಖರೀದಿ, ಮಾರಾಟ ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ ಎಂದಿರುವ ಸಚಿವರು, ಈಗಾಗಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಇದರಡಿ ಯಾವುದೇ ರೀತಿಯ ಪ್ರಾಣಿ ಹಿಂಸೆ ತಡೆಯಬಹುದಾಗಿದೆ. ಗೋವಂಶ ಗೋಹತ್ಯೆ, ಗೋವುಗಳ ಅಕ್ರಮ ಸಾಗಾಟ, ಹಿಂಸೆ ತಡೆಯುವ ಬಗ್ಗೆ ಮಂಡಳಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ.
ಪಶು ಸಂಗೋಪನೆ ಸಚಿವನಾದ ದಿನದಿಂದ ಗೋಹತ್ಯೆ ನಿಷೇಧದ ಕಠಿಣ ಕಾಯ್ದೆ ಜಾರಿಗೊಳಿಸುವ ಮಹದಾಸೆ ಇತ್ತು. ಈ ಸಂಬಂಧ ಸಂಕಲ್ಪವೂ ಮಾಡಿದ್ದೇನೆ. ಅದು ಈಗ ಕೈಗೂಡುವ ಸಮಯ ಬಂದಿರುವುದು ಖುಷಿ ತಂದಿದೆ.| ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ